ಉಡುಪಿ: ಅನಾರೋಗ್ಯ ಪೀಡಿತ ಮಕ್ಕಳ ಸಹಾಯಕ್ಕೆ ನಿಂತ ಸಮಾಜ ಸೇವಕ ಉಡುಪಿಯ ರವಿ ಕಟಪಾಡಿ ಅವರು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ನಡೆಸಿಕೊಡುವ ಹಿಂದಿ ಖಾಸಗಿ ವಾಹಿನಿಯ ಪ್ರಸಿದ್ಧ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್‌ಪತಿ'ಗೆ ಆಯ್ಕೆ ಆಗಿದ್ದಾರೆ.
ಮುಂಬೈನಲ್ಲಿ ಜ.13ರಂದು ಶೂಟಿಂಗ್ ನಡೆಯಲಿದ್ದು, ಜನವರಿ 15ರಂದು ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆ ಇದೆ. ಅರವಿ ಕಟಪಾಡಿ ಅವರು ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಿ ಸಂದರ್ಭ ಪ್ರತಿವರ್ಷ ವಿಭಿನ್ನ ವೇಷಗಳನ್ನು ಧರಿಸಿ ಬಂದ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ದಾನ ನೀಡುತ್ತಾ ಬಂದಿದ್ದಾರೆ. ಈ ಮೂಲಕ ಕಳೆದ ಒಂದು ದಶಕದಿಂದ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮ ಆಯೋಜಕರಿಂದ ರವಿ ಕಟಪಾಡಿ ಅವರಿಗೆ ಫೋನ್ ಕರೆ ಬಂದಿದ್ದು, ಈ ಬಗ್ಗೆ ಕಟಪಾಡಿ ಮೊದಲಿಗೆ ತಿರಸ್ಕರಿಸಿದ್ದರು. ಆದರೆ ಮತ್ತೊಮ್ಮೆ ಕರೆ ಬಂದು ಕೇಳಿಕೊಂಡಾಗ ಒಪ್ಪಿಗೆ ಸೂಚಿಸಿದ್ದಾರೆ.
ಬಡತನದ ಜೀವನ ನಡೆಸುವ ರವಿ ಕಟಪಾಡಿ, ಸಿಮೆಂಟ್ ಸೆಂಟ್ರಿಂಗ್ ಕೆಲಸ ಮಾಡುತ್ತಾರೆ. ಪ್ರತಿವರ್ಷ ವೇಷ ಧರಿಸಿ ಸಂಗ್ರಹವಾದ ಲಕ್ಷಾಂತರ ರೂಪಾಯಿ ದೇಣಿಗೆಯನ್ನು ಏಳೆಂಟು ಮಕ್ಕಳಿಗೆ ನೀಡುತ್ತಾ ಬಂದಿದ್ದಾರೆ. ಇದೀಗ ರವಿ ಕಟಪಾಡಿಯವರ ವಿಭಿನ್ನ ಸೇವೆಯನ್ನು ಪರಿಗಣಿಸಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕಾರ್ಯಕ್ರಮದ ಕರ್ಮವೀರ್ ವಿಭಾಗದಲ್ಲಿ ಈ ಬಾರಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.
Kshetra Samachara
14/01/2021 06:09 pm