ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಸಜಿಪಡು ಗ್ರಾಮದ ತಲೆಮೊಗರು ಎಂಬಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಈಜಲು ಹೋದ ಯುವಕನೋರ್ವ ನೀರುಪಾಲಾದ ಘಟನೆ ನಡೆದಿದೆ.
ಸದ್ಯ ನೀರು ಪಾಲಾದ ಯುವಕ ತೊಟ್ಟಿಲು ತೂಗುವ ಸಂಭ್ರಮಕ್ಕೆಂದು ಸಂಬಂಧಿಗಳ ಮನೆಗೆ ಬಂದಿದ್ದ ಎನ್ನಲಾಗಿದೆ.
ಇನ್ನು ಅಗ್ನಿಶಾಮಕದಳ ಮತ್ತು ಈಜುಗಾರರ ಸಹಾಯದಿಂದ ನೀರುಪಾಲಾದ ಅಶ್ವಿತ್ ಸಪಲ್ಯ (19) ಹುಡುಕಾಟ ಮುಂದುವರೆದಿದೆ. ನೀರು ಪಾಲಾಗಿದ್ದ ಮತ್ತೋರ್ವ ಹರ್ಷ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಸಜಿಪನಡುವಿನ ತಲೆಮೊಗರುವಿನ ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವನ್ನ ತೊಟ್ಟಿಲು ತೂಗುವ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಶ್ವಿತ್ ಸಪಲ್ಯ, ಸಂಬಂಧಿಗಳಾದ ವಿಶಾಲ್ ಗಾಣಿಗ,ವಿಕಾಸ್ ಗಾಣಿಗ,ಲಿಖಿತ್ ಗಾಣಿಗ,ಹರ್ಷ ಗಾಣಿಗ ಜೊತೆ ಸಮೀಪದ ನೇತ್ರಾವತಿ ನದಿಗೆ ನೀರಾಟವಾಡಲು ತೆರಳಿದ್ದಾರೆ.
ಈ ವೇಳೆ ಅಶ್ವಿತ್ ಮತ್ತು ಹರ್ಷ ನೀರುಪಾಲಾಗಿದ್ದಾರೆ. ಜತೆಯಲ್ಲಿದ್ದ ಯುವಕರು ಹರ್ಷನನ್ನ ರಕ್ಷಿಸಿ ಮೇಲಕ್ಕೆತ್ತಿದ್ದಾರೆ ಯುವಕರ ಕೂಗು ಕೇಳಿಸಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರಾದ ರಾಜೇಶ್ ಮತ್ತು ಹರೀಶ್ ಎಂಬವರು ಗಂಭೀರ ಸ್ಥಿತಿಯಲ್ಲಿದ್ದ ಹರ್ಷನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆ ಸೇರಿಸಿದ್ದಾರೆ.
ನೀರು ಪಾಲಾದ ಅಶ್ವಿತ್ ಗಾಗಿ ಸ್ಥಳೀಯ ದೋಣಿಗಾರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಎಸ್.ಐ. ಹರೀಶ್ ನೇತೃತ್ವದಲ್ಲಿ ಸಿಬ್ಬಂದಿ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
PublicNext
03/07/2022 08:52 pm