ಪುತ್ತೂರು: ಕೆಯ್ಯೂರು ಗ್ರಾಮದ ನೆಟ್ಟಾಳ ಸಮೀಪದ ಪೊಯ್ಯೊಲೆ ಎಂಬಲ್ಲಿ ನಡೆದ ಅಟೋ ರಿಕ್ಷಾ ಮತ್ತು ಜೀಪ್ ಅಪಘಾತದಲ್ಲಿ ದೇರ್ಲ ನಿವಾಸಿ ಪ್ರವೀಣ್ (32) ರವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ದೇರ್ಲದಿಂದ ಮಾಡಾವುಗೆ ಬೆಳಿಗ್ಗೆ ಕೂಲಿಕಾರ್ಮಿಕರನ್ನು ಸಾಗಿಸುತ್ತಿದ್ದ ಎಟ್ಯಡ್ಕ ಗಿರಿಧರ ಎಂಬವರ ರಿಕ್ಷಾ ಹಾಗೂ ಕೆಯ್ಯೂರಿನಿಂದ ದೇರ್ಲಕ್ಕೆ ಹೋಗುತ್ತಿದ್ದ ಚಂದ್ರಶೇಖರ ಪೂಜಾರಿ ಕಣಿಯಾರು ಎಂಬವರ ಜೀಪು ನಡುವೆ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ದೇರ್ಲ ನಿವಾಸಿಗಳಾದ ಗುರು, ಪ್ರವೀಣ್, ಹರ್ಷಿತ್, ಲೀಲಾ ಮತ್ತು ಲಕ್ಷ್ಮೀರವರು ಗಾಯಗೊಂಡಿದ್ದು ಇದರಲ್ಲಿ ಗುರು ಮತ್ತು ಪ್ರವೀಣ್ ರವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಇವರಲ್ಲಿ ಪ್ರವೀಣ್ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. ದೇರ್ಲ ನಿವಾಸಿ ಚೋಮ ಮತ್ತು ಗಂಗಮ್ಮರವರ ಪುತ್ರರಾಗಿರುವ ಪ್ರವೀಣ್ ರವರು ಅವಿವಾಹಿತರಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು.
ಉಳಿದ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಅಪಘಾತದಲ್ಲಿ ಅಟೋ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು ರಿಕ್ಷಾ ಚಾಲಕ ಮತ್ತು ಜೀಪು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
29/01/2022 05:02 pm