ಕಾಪು: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬ ನೆಲಕ್ಕುರುಳಿದರೂ ಅದೃಷ್ಟವಶಾತ್ ಸ್ಥಳದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.
ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ- ಪಣಿಯೂರು ಕ್ರಾಸ್ ಬಳಿ ಸಕ್ಕರೆ ಚೀಲಗಳನ್ನು ತುಂಬಿಕೊಂಡು ಮಂಗಳೂರಿನತ್ತ ಸಾಗುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಪರಿಣಾಮ ವಿದ್ಯುತ್ ಕಂಬ
ಸಹಿತ ವಿದ್ಯುತ್ ಸಂಪರ್ಕವಿದ್ದ ತಂತಿಯೂ ನೆಲಕ್ಕೆ ಬಿದ್ದಿದೆ.
ವಿದ್ಯುತ್ ಸರಬರಾಜಾಗುತ್ತಿದ್ದ ತಂತಿ ನೆಲಕ್ಕೆ ಬೀಳುತ್ತಿದ್ದ ವೇಳೆ ಅದೇ ದಾರಿಯಾಗಿ ಉಡುಪಿಯತ್ತ ಧಾವಿಸುತ್ತಿದ್ದ ಸರಕಾರಿ ಬಸ್ಸೊಂದು ಕೂದಲೆಳೆ ಅಂತರದಲ್ಲಿ ಮುಂದೆ ಸಾಗಿದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ರಸ್ತೆ ಪಕ್ಕದಲ್ಲಿದ್ದ ಗುಡಿಸಲಿಗೆ ಬೆಂಕಿ ತಗುಲಿದೆ. ಘಟನೆಯಿಂದ ಕೆಲ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ವಿಷಯ ತಿಳಿದ ಕೂಡಲೇ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಕಾರಣ ಅವಘಡ ತಪ್ಪಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
26/01/2022 07:36 pm