ಮುಲ್ಕಿ: ಮುಲ್ಕಿ ಠಾಣಾ ವ್ಯಾಪ್ತಿಯ ಚಿತ್ರಾಪು ಕೆರೆಬಿಯನ್ ರೆಸಾರ್ಟ್ ನಲ್ಲಿ ಹೊಸ ವರ್ಷದ ಮೋಜು-ಮಸ್ತಿ ಮಾಡಲು ಬಂದಿದ್ದ ಕುಟುಂಬದ ವ್ಯಕ್ತಿಯೊಬ್ಬರು ನೀರುಪಾಲಾದ ದಾರುಣ ಘಟನೆ ನಡೆದಿದೆ. ಉಳಿದವರನ್ನು ಸ್ಥಳೀಯ ಮಂತ್ರ ಸರ್ಫ್ ಕ್ಲಬ್ ತಂಡದ ಸದಸ್ಯರು ರಕ್ಷಿಸಿದ್ದಾರೆ.
ಮೃತ ವ್ಯಕ್ತಿಯನ್ನು ಕಡಬ ನಿವಾಸಿ ಜಯರಾಮ ಗೌಡ (50) ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಸಮೀಪದ ಕಡಬದಿಂದ ಸುಮಾರು 9 ಜನ ಹೊಸ ವರ್ಷದ ಮೋಜು ಮಸ್ತಿ ಗೆಂದು ಮುಲ್ಕಿ ಸಮೀಪದ ಚಿತ್ರಾಪು ಕೆರೆಬಿಯನ್ ರೆಸಾರ್ಟ್ ಗೆ ಬಂದಿದ್ದು, ಅವರಲ್ಲಿ ಐದು ಮಂದಿ ಈಜಲು ನೀರಿಗೆ ಇಳಿದಿದ್ದಾರೆ.
ನದಿಯಲ್ಲಿ ಸೊಂಟದವರೆಗೆ ನೀರಿದ್ದು ನಡೆದುಕೊಂಡು ಹೋಗುತ್ತಿರುವಾಗ ಸಸಿಹಿತ್ಲು ಅಳಿವೆ ಬಾಗಿಲಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅಪಾಯದ ಮುನ್ಸೂಚನೆ ಕಂಡಾಗ ಎಲ್ಲರೂ ಸಹಾಯಕ್ಕಾಗಿ ಕಿರುಚಾಡಿದ್ದಾರೆ.
ಕಿರುಚಾಟ ಕೇಳಿದ ಸ್ಥಳೀಯ ಕೊಳಚಿಕಂಬಳ ಮಂತ್ರ ಸರ್ಫ್ ಕ್ಲಬ್ ತಂಡದ ಸದಸ್ಯರಾದ ಶ್ಯಾಮ್, ನಿಹಾಲ್ ಮತ್ತಿತರರು ಸೇರಿ ಮುಳುಗುತ್ತಿದ್ದ ನಾಲ್ವರನ್ನು ರಕ್ಷಿಸಿದ್ದು ನೀರುಪಾಲಾದ ಓರ್ವನ ಶವ ಸಸಿಹಿತ್ಲು ಮುಂಡಾ ಬೀಚ್ ಬಳಿ ಪತ್ತೆಯಾಗಿದೆ.
ಈಜಾಡಲು ತೆರಳಿದ್ದ ಕುಟುಂಬ ಸದಸ್ಯರಿಗೆ ಯಾವುದೇ ಲೈಫ್ ಜಾಕೆಟ್ ರಕ್ಷಣೆ ಇರಲಿಲ್ಲ ಎಂದು ತಿಳಿದು ಬಂದಿದ್ದು, ರೆಸಾರ್ಟ್ ಮಾಲೀಕರ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಹೊಸ ವರ್ಷಕ್ಕೆ ಬೀಚ್ ಪ್ರದೇಶದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದ್ದರೂ ಚಿತ್ರಾಪು ಕೆರೆಬಿಯನ್ ರೆಸಾರ್ಟ್ ಪ್ರವಾಸಿಗರಿಗೆ ತೆರೆದಿದ್ದು, ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಚಿತ್ರಾಪು ಕೆರೆಬಿಯನ್ ಬೀಚ್ ನಲ್ಲಿ ಹೊಸ ವರ್ಷದ ಮೋಜು ಮಸ್ತಿಗೆ ಅನೇಕ ಕುಟುಂಬಗಳು ಗುರುವಾರ ಬಂದಿದ್ದು, ಅವಘಡ ನಡೆದ ಕೂಡಲೇ ರೆಸಾರ್ಟ್ ಮಾಲೀಕ ಪ್ರವಾಸಿಗರನ್ನು ತರಾತುರಿಯಲ್ಲಿ ವಾಪಸ್ ಕಳಿಸಿದ್ದಾರೆ.
ಆದೇಶ ಉಲ್ಲಂಘಿಸಿದ ಕೆರೆಬಿಯನ್ ರೆಸಾರ್ಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
31/12/2020 07:07 pm