ಕೊಲ್ಲೂರು: ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಿ 100 ಕಾಲುಸಂಕಗಳಿಗೆ 5 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ಪಡೆಯಲಾಗಿದೆ. ಕ್ಷೇತ್ರದಲ್ಲಿ ಕಾಲು ಸಂಕಗಳ ಅಭಿವೃದ್ಧಿಗೆ ಇನ್ನೂ 15 ಕೋಟಿ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಕೊಲ್ಲೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅತಿವೃಷ್ಠಿಯಿಂದಾಗಿ ಸಾಕಷ್ಟು ಆಸ್ತಿ ಪಾಸ್ತಿಗಳು ಹಾನಿಯಾಗಿವೆ. ಅತಿವೃಷ್ಠಿಯಿಂದಾಗಿ ಮನೆ, ಆಸ್ತಿ, ಬೆಳೆ ಹಾನಿಯಾದವರಿಗೆ ಮತ್ತು ಮೀನುಗಾರಿಕಾ ಬೋಟು, ಬಲೆಗಳನ್ನು ಕಳೆದುಕೊಂಡವರಿಗೆ ತುರ್ತು ಪರಿಹಾರವನ್ನು
ಈಗಾಗಲೇ ನೀಡಲಾಗಿದೆ. ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ, ದೋಣಿ, ಮೀನಿನ ಬಲೆ ಹಾನಿಯಾದವರ ಸಮೀಕ್ಷೆ ನಡೆಸಿ ಕೇಂದ್ರ ಸರಕಾರದ ಪ್ರಕೃತಿ ವಿಕೋಪದ ಅಡಿಯಲ್ಲಿ ಸುಮಾರು 50 ಲಕ್ಷ ರೂ.ಗಿಂತ ಹೆಚ್ಚು ಅನುದಾನವನ್ನು ಬೈಂದೂರು ಕ್ಷೇತ್ರಕ್ಕೆ ಕೊಟ್ಟಿದ್ದೇವೆ ಎಂದರು.
ಪಿಪಿಪಿ ಮಾದರಿಯಲ್ಲಿ 228.00 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೀ ಪ್ಲೇನ್, ಮರೀನಾ ಹಾಗೂ ಬಹುಪಯೋಗಿ ಬಂದರು ಯೋಜನೆ ಟೆಂಡರ್ ಹಂತದಲ್ಲಿದೆ. 165.00 ಕೋಟಿ ರೂ. ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆ ಅನುಮೋದನೆ ದೊರೆತಿದೆ. 73.71 ಕೋಟಿ ವೆಚ್ಚದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. 35 ಕೋಟಿ ವೆಚ್ಚದಲ್ಲಿ ಸುಬ್ಬರಾಡಿ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು ಗೇಟ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
Kshetra Samachara
26/08/2022 10:26 am