ಮಂಗಳೂರು: ಇತ್ತೀಚೆಗೆ ಕುಸಿದಿದ್ದ ಮರವೂರು ಸೇತುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಜು.30ರಿಂದ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ತಜ್ಞರ ಉಪಸ್ಥಿತಿಯಲ್ಲಿ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎನ್ನುವುದನ್ನು ಗುರುವಾರ ಪರೀಕ್ಷಿಸಿದರು. ಪರೀಕ್ಷೆ ಯಶಸ್ವಿಯಾಗಿದ್ದು, ಶುಕ್ರವಾರ ಮಧ್ಯಾಹ್ನದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಕೆಲ ದಿನಗಳ ಹಿಂದೆಯೇ ಸೇತುವೆಯ ಪಿಲ್ಲರ್‌ನ್ನು ಮೇಲಕ್ಕೆ ಎತ್ತಿ ಯಥಾಸ್ಥಿತಿಗೆ ತರಲಾಗಿತ್ತು. ನಂತರ ವಾಹನ ಸಂಚಾರ ಸುಲಭವಾಗಲೆಂದು ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಇದೀಗ ಕಾಮಗಾರಿ ಪೂರ್ಣಗೊಂಡಿದೆ.
ಮರವೂರು ಸೇತುವೆಯಲ್ಲಿ ಇತ್ತೀಚೆಗೆ ಭಾರೀ ಬಿರುಕು ಮೂಡಿ ಪಿಲ್ಲರ್ ಕುಸಿದಿದ್ದನ್ನು ಸ್ಥಳೀಯರೊಬ್ಬರು ಗಮನಿಸಿ ಮಾಹಿತಿ ರವಾನಿಸಿದ್ದರು. ಕೂಡಲೇ ಸೇತುವೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಮಂಗಳೂರು ವಿಮಾನ ನಿಲ್ದಾಣ, ಬಜ್ಪೆ, ಕಟೀಲು, ಅದ್ಯಪಾಡಿ ಕಡೆಗೆ ತೆರಳುವರು ಸುತ್ತುಬಳಸಿ ಹೋಗುವಂತಾಗಿತ್ತು. ಇದೀಗ ಸುಮಾರು ಒಂದೂವರೆ ತಿಂಗಳ ಬಳಿಕ ಸೇತುವೆ ಮತ್ತೆ ಸಂಚಾರಕ್ಕೆ ಮುಕ್ತವಾಗಲಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
Kshetra Samachara
29/07/2021 07:11 pm