ಉಡುಪಿ: ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮದ ಜನತೆಯೊಂದಿಗೆ ಚರ್ಚಿಸಿ ಕಾಮಗಾರಿಗಳನ್ನು ಕೈಗೊಳ್ಳಿ , ಇದರಿಂದ ಕಾಮಗಾರಿಯ ಸಂಪೂರ್ಣ ಪ್ರಯೋಜನ ಸಾರ್ವಜನಿಕರಿಗೆ ದೊರೆಯಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಗಳಲ್ಲಿನ ಸ್ಥಳೀಯ ಜಲ ಮೂಲಗಳನ್ನು ಗುರುತಿಸಲು ಗ್ರಾಮಸ್ಥರ ಮತ್ತು ಜನಪ್ರತಿನಿಧಿಗಳ ನೆರವು ಅಗತ್ಯವಿದ್ದು, ಯಾವ ಕಾಮಗಾರಿಗಳು ತುರ್ತು ಅತ್ಯಗತ್ಯವಾಗಿವೆ ಎಂಬುದನ್ನು ತಿಳಿದು ಅಂತಹ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳುವಂತೆ ಸೂಚಿಸಿದ ಅಧ್ಯಕ್ಷ ದಿನಕರಬಾಬು, ಕಾಮಗಾರಿ ಆರಂಭಕ್ಕೆ ಮುನ್ನ ಸ್ಥಳೀಯವಾಗಿ ಸಭೆ ಕರೆದು ಅಭಿಪ್ರಾಯಗಳನ್ನು ಸಂಗ್ರಹಿಸಿ, ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾನದಂಡದಲ್ಲಿ ಆದಾಯಮಿತಿಯನ್ನು ವಸತಿ ನಿಗಮದಿಂದ ರೂ.32000 ಕ್ಕೆ ನಿಗಧಿಪಡಿಸಿದ್ದು, ಇದರಿಂದ ಬಿ.ಪಿಎಲ್ ಕಾರ್ಡ್ ಹೊಂದಲು ಆಧಾಯಮಿತಿ ರೂ.120000 ಇದೆ, ಇದರಿಂದ ರೂ. 32000 ಕ್ಕಿಂತ ಹೆಚ್ಚು ಆದಾಯ ಹೊಂದಿರುವ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಅಸಾಧ್ಯವಾಗಿದೆ ಅದ್ದರಿಂದ ರೂ. 32000 ಕ್ಕಿಂತ ಹೆಚ್ಚು ಆದಾಯವಿರುವ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಫಲಾನುಭವಿಗೆ , ವಸತಿ ಯೋಜನೆ ಪಡೆಯಲು ಆದಾಯಮಿತಿಯನ್ನು ಕಡಿಮೆ ಮಾಡುವ ಕುರಿತಂತೆ ರಾಜೀವ್ ಗಾಂಧೀ ವಸತಿ ನಿಗಮಕ್ಕೆ ಪತ್ರ ಬರೆಯುವಂತೆ ದಿನಕರ ಬಾಬು ತಿಳಿಸಿದರು.
Kshetra Samachara
22/01/2021 09:58 am