ಉಡುಪಿ: ಜಿಲ್ಲೆಯ ಯುವಕ ಸಂಘಗಳಲ್ಲಿನ ಯುವಕರಿಗೆ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ಅವರಿಗೆ ಅಗತ್ಯ ತರಬೇತಿ ನೀಡುವ ಮೂಲಕ, ಯುವಶಕ್ತಿಯನ್ನು ಜಿಲ್ಲೆಯ ಅಭಿವೃಧ್ದಿ ಕಾರ್ಯಕ್ಕೆ ಬಳಸಿಕೊಳ್ಳುವಂತಹ ಕಾರ್ಯಕ್ರಮ ರೂಪಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನೆಹರು ಯುವಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಹರು ಯುವಕೇಂದ್ರದ ಮೂಲಕ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಯುವಕ ಸಂಘಗಳ ಸದಸ್ಯರಿಗೆ ಅವರಲ್ಲಿನ ಸಮಾಜಸೇವೆ ಗುಣ, ಕೌಶಲ್ಯ, ಸಾಹಸ ಪ್ರವೃತ್ತಿ ಅಭಿವೃದ್ಧಿಗೊಳಿಸುವಂತೆ ಚಟುವಟಿಕೆ ಏರ್ಪಡಿಸಿ. ಯುವಕ, ಯುವತಿಯರಿಗೆ ವಿಕೋಪ ನಿರ್ವಹಣೆ ಸೇರಿದಂತೆ ಅತ್ಯಾವಶ್ಯಕ ಸಂದರ್ಭ ಜಿಲ್ಲಾಡಳಿತ ಮತ್ತು ಸಮಾಜದ ನೆರವಿಗೆ ಧಾವಿಸುವಂತಹ ತರಬೇತಿ ಕಾರ್ಯಕ್ರಮ ಆಯೋಜಿಸಿ, ತುರ್ತು ಸಂದರ್ಭ ಈ ರೀತಿ ತರಬೇತಿ ಪಡೆದ ಯುವಕರ ಸೇವೆಯನ್ನು ಜಿಲ್ಲಾಡಳಿತದ ನೆರವಿಗೆ ಬಳಸಿಕೊಳ್ಳುವಂತೆ ಜಿ.ಜಗದೀಶ್ ತಿಳಿಸಿದರು.
ನೆಹರು ಯುವ ಕೇಂದ್ರದಿಂದ ಸಿದ್ಧಪಡಿಸುವ ವಾರ್ಷಿಕ ಕಾರ್ಯಕ್ರಮಗಳಲ್ಲಿ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಯುವಕರು ತೊಡಗುವಂತಹ ಕಾರ್ಯಕ್ರಮ ರೂಪಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುವ ಯುವ ತಂಡಗಳನ್ನು ಸೂಕ್ತ ರೀತಿ ಪ್ರೋತ್ಸಾಹಿಸಿ, ಯುವಕರಲ್ಲಿ ಆತ್ಮ ವಿಶ್ವಾಸ ಮೂಡಿಸುವಂತಹ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತರಬೇತಿ, ದೈಹಿಕ- ಮಾನಸಿಕ ಆರೋಗ್ಯ ವೃದ್ಧಿ ತರಬೇತಿ, ತಮ್ಮ ಗ್ರಾಮಗಳಲ್ಲಿ ಸ್ವ ಚ್ಛತಾ ಕಾರ್ಯಕ್ರಮ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಆ ಸೌಲಭ್ಯ ಜನರಿಗೆ ದೊರಕಿಸುವ ಕಾರ್ಯಕ್ರಮ ಮತ್ತು ಯುವಕರ ಕ್ರೀಡಾ- ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆಗೆ ಪೂರಕ ಯೋಜನೆಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಸ್ವಾಗತಿಸಿ, ವಂದಿಸಿದರು.
Kshetra Samachara
08/12/2020 05:23 pm