ಕುಂದಾಪುರದಿಂದ ಕಾಶ್ಮೀರಕ್ಕೆ ಸುಮಾರು 6 ಸಾವಿರ ಕಿಲೋಮೀಟರ್ ನಷ್ಟು ಬೈಕ್ ರೈಡ್ ಮಾಡಲು ಹೊರಟಿದ್ದಾರೆ ಕುಂಭಾಸಿಯ ಸಾಹಸಿ ಯುವತಿ ಸಾಕ್ಷಿ ಹೆಗ್ಡೆ. ಈಕೆಯ ಒಬ್ಬಂಟಿ ಲಾಂಗ್ ಡ್ರೈವ್ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸಾಹಸ ಪ್ರವೃತ್ತಿಯ ಉತ್ತಮ ಬೈಕ್ ರೈಡರ್ ಆಗಿರುವ ಸಾಕ್ಷಿ ಹೆಗ್ಡೆ, ಮೇ 25ರಂದು ಬೆಳಿಗ್ಗೆ ಕುಂಭಾಸಿ ಮನೆಯಿಂದ ಹೊರಟು ಸಂಜೆ 5 ಗಂಟೆಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ 520 ಕಿ.ಮೀ. ದೂರ ಬೈಕ್ ರೈಡ್ ಮಾಡಿದ್ದಾರೆ. 2ನೇ ದಿನ 380 ಕಿ.ಮೀ. ಸಂಚರಿಸಿ ಪನ್ವೇಲ್ ತಲುಪಿದ್ದಾರೆ. 3ನೇ ದಿನದಲ್ಲಿ 700 ಕಿ.ಮಿ. ಕ್ರಮಿಸುವ ಗುರಿ ಇಟ್ಟುಕೊಂಡಿದ್ದಾರೆ. ಹೀಗೆ 15 ದಿನಗಳ ಒಳಗೆ ಕಾಶ್ಮೀರ ಪ್ರವಾಸ ಮಾಡಿ ಊರಿಗೆ ವಾಪಸಾಗಲಿದ್ದಾರೆ ಸಾಕ್ಷಿ.
ಸಾಕ್ಷಿ ತಂದೆ ಶಿವರಾಮ ಹೆಗ್ಡೆ ಮೂಲತಃ ಹೊನ್ನಾವರದವರಾಗಿದ್ದು, ತಾಯಿ ಪುಷ್ಪಾ ಕುಂದಾಪುರದವರು. ಇವರ 3ನೇ ಮಗಳೇ ಸಾಕ್ಷಿ ಹೆಗ್ಡೆ. ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನಲ್ಲಿ ಪದವಿ ಕಲಿಯುತ್ತಿದ್ದು, ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕುಂಭಾಸಿಯಲ್ಲೇ ವಾಸವಾಗಿದ್ದಾರೆ.
ಈ ಲಾಂಗ್ ಜರ್ನಿಯನ್ನು ಸಾಕ್ಷಿ, ಸದುದ್ದೇಶ ಇಟ್ಟುಕೊಂಡು ಮಾಡುತ್ತಿದ್ದು, ನಾನಾ ಊರುಗಳಿಗೆ ಹೋದಾಗ ಅಲ್ಲಿ ಈ ಸದುದ್ದೇಶವನ್ನು ತಿಳಿಸಲಿದ್ದಾರಂತೆ. ಈ ತಿಂಗಳ ಮಧ್ಯದಲ್ಲಿ ವಾಪಸಾಗಲಿರುವ ಈ ʼಸಾಹಸಿʼಗೆ ಶುಭ ಹಾರೈಸೋಣ.
Kshetra Samachara
03/06/2022 01:55 pm