ಕಳೆದ ಕೆಲವು ವರ್ಷಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಮಲೆನಾಡು ಭಾಗದ ಕುರುಡರ ಸಂಗೀತ ತಂಡವೊಂದು ಬೀದಿ ಬದಿಯಲ್ಲಿ ಸಂಗೀತ ಸುಧೆಯನ್ನು ಹರಿಸುತ್ತಿದೆ.
"ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ ಶೃಂಗೇರಿ" ತಂಡದಲ್ಲಿ 10 ಸದಸ್ಯರಿದ್ದಾರೆ. ಈ ತಂಡವು ಪ್ರತೀ ದಿನ ಯಾವುದಾದರೊಂದು ಊರಿನ ಹೃದಯ ಭಾಗದಲ್ಲಿ ಕನ್ನಡ ದಾಸರ ಪದಗಳು, ಚಿತ್ರ ಗೀತೆಗಳು, ಭಾವ ಗೀತೆಗಳ ಜೊತೆಗೆ ತುಳು ಗೀತೆಯನ್ನು ಹಾಡಿ ಜನರಿಗೆ ಸಾಹಿತ್ಯ ಮತ್ತು ಸಂಗೀತದ ರಸದೌತಣ ನೀಡುತ್ತಿದೆ.
ಹುಟ್ಟು ಕುರುಡರಾದ ಇವರು ಶಾಲಾ ಶಿಕ್ಷಣದ ಜೊತೆಗೆ ಸಂಗೀತ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಕಲಿತವರು. ಇವರ ತಂಡದಲ್ಲಿ ಇಲೆಕ್ಟ್ರೋನಿಕ್ ಆರ್ಗನ್, ತಬಲಾ, ಪ್ಯಾಡ್ ಸೇರಿದಂತೆ ಹಲವಾರು ಸಂಗೀತ ಉಪಕರಣದೊಂದಿಗೆ ಧ್ವನಿ ವರ್ಧಕ ವ್ಯವಸ್ಥೆ ಕೂಡ ಇದ್ದು ಶೋತೃಗಳನ್ನು ಸೆಳೆಯುತ್ತಾರೆ.
ಇದರ ಜೊತೆಜೊತೆಗೇ ಪಿನಾಯಿಲ್ ಕೂಡಾ ಮಾಡಿ ಅದನ್ನು ಕಾರ್ಯಕ್ರಮದಲ್ಲಿ ತಂದಿರಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾರೆ. ಜನ ತಮ್ಮ ಕೈಲಾದ ಸಹಾಯ ಮಾಡಿದರೆ ಇವರಿಗೆ ಎರಡು ಹೊತ್ತಿನ ಊಟ. ಓರ್ವ ಮಹಿಳೆ ಸೇರಿದಂತೆ ಬಹುತೇಕ ಅಂಧರೆ ಇರುವ ಕಲಾತಂಡದವರು ಸ್ವಾಭಿಮಾನಿ ಬದುಕಿಗೆ ಸಂಗೀತವನ್ನು ಆಯ್ಕೆ ಮಾಡಿಕೊಂಡಿದ್ದು ಶ್ಲಾಘನೀಯ ಕಾರ್ಯ.
ವರದಿ: ರಹೀಂ ಉಜಿರೆ
PublicNext
08/04/2022 12:22 pm