ಉಡುಪಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಕುಂದಾಪುರ ಮತ್ತು ಕರ್ನಾಟಕ ಪಬ್ಲಿಕ್ ಶಾಲೆ ಕೋಟೇಶ್ವರ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಗುಲಾಬಿ ಆಂದೋಲನ ಜಾಥಾ ಕಾರ್ಯಕ್ರಮವು ಶುಕ್ರವಾರ ಕೋಟೇಶ್ವರದಲ್ಲಿ ನಡೆಯಿತು.
ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಇವರು ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು.
ಸದರಿ ಜಾಥಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಂದ ಒಂದು ಗುಲಾಬಿ ಹೂ ನೀಡುವುದರ ಮೂಲಕ ಪ್ರತಿ ಅಂಗಡಿಯ ಮಾಲೀಕರಿಗೆ ತಂಬಾಕು ತ್ಯಜಿಸಿ, ಜೀವನವನ್ನು ಆಯ್ದಕೊಳ್ಳಿ ಮತ್ತು ತಂಬಾಕು ಮುಕ್ತ ನಾಡನ್ನು ನಿರ್ಮಿಸೋಣ ಎಂಬ ಘೋಷಣೆಯೊಂದಿಗೆ ಅರಿವು ಮೂಡಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಪ್ರಾಸ್ತವಿಕವಾಗಿ ಮಾತನಾಡಿ, ತಂಬಾಕು ಸೇವನೆಯು ಜೀವನಕ್ಕೆ ಮಾರಕವಾಗಿದ್ದು, ಅದರಿಂದ ವಿವಿಧ ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಇದ್ದು, ಪ್ರಸ್ತುತ ಕೋವಿಡ್ -19 ಕೂಡ ಅತೀ ವೇಗವಾಗಿ ಹರಡಲು ಕಾರಣವಾಗಿದೆ ಎಂದರು.
ತಂಬಾಕನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಇಲಾಖೆಯಡಿಯಲ್ಲಿ ತಂಬಾಕು ನಿಯಂತ್ರಣ ಕೋಶ ಇದ್ದು, ಪ್ರತೀ ತಿಂಗಳು ಜಿಲ್ಲಾದ್ಯಂತ ಪ್ರತೀ ತಾಲೂಕಿನ ಎಲ್ಲಾ ಅಂಗಡಿ/ ಹೋಟೇಲ್ಗಳಲ್ಲಿ ಕೋಟ್ಪಾ -2003 ಕಾಯ್ದೆಯಡಿ ದಾಳಿ ನಡೆಸಿ, ಸೂಚನಾ ಘಲಕಗಳಿಲ್ಲದೇ ಮಾರಾಟ ಮಾಡುತ್ತಿರುವಂತಹ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಕಡ್ಡಾಯವಾಗಿ ಸೂಚನಾ ಘಲಕಗಳನ್ನು ಅಳವಡಿಸುವಂತೆ ಸೂಚಿಸಲಾಗುತ್ತದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಇಲಾಖೆಯಡಿಯಲ್ಲಿ ನಡೆಯುವ ತಂಬಾಕು ದುಷ್ಪರಿಣಾಮದ ಜಾಗೃತಿ ಅಭಿಯಾನಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಾ, ತಂಬಾಕನ್ನು ನಿಯಂತ್ರಣ ತರುವ ನಿಟ್ಟಿನಲ್ಲಿ ಎಲ್ಲರೂ ಒಟ್ಟುಗೂಡಿ ಕಾರ್ಯನಿರ್ವಹಿಸೋಣ ಎಂದರು.
ಕೋಟೇಶ್ವರ ಕರ್ನಾಟಕ ಪಬ್ಲಿಕ್ ಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಹೊಳ್ಳ, ತಂಬಾಕು ಕುರಿತು ವಿದ್ಯಾರ್ಥಿಗಳು ಹೆಚ್ಚು ಜಾಗೃತಗೊಂಡು ತಮ್ಮ ಕುಟುಂಬದವರ ಆರೋಗ್ಯವನ್ನು ಸುಸ್ಥಿರದಿಂದ ಕಾಪಾಡಿಕೊಳ್ಳಲಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಕಾರ್ಯಕ್ರಮದಲ್ಲಿ ಕೋಡಿ ಪ್ರಾ.ಆ.ಕೇಂದ್ರದ ವ್ಯೆದ್ಯಾಧಿಕಾರಿ ಡಾ.ಉಮೇಶ್ ನಾಯ್ಕ, ಕೋಟೇಶ್ವರ ಸ.ಪ.ಪೂ ಕಾಲೇಜು ಪ್ರಾಂಶುಪಾಲ ಡೇನಿಸ್ ಬಾಂಜಿ, ಶಾಲಾ ಸಹ ಶಿಕ್ಷಕ ಪ್ರದೀಪ್ ಶಾನುಭೋಗ, ಸೇರಿದಂತೆ ಮುಂತಾದವರಿದ್ದರು.
Kshetra Samachara
09/01/2021 09:51 am