ಹೆಬ್ರಿ : ವಿದ್ಯಾರ್ಥಿಗಳಿದ್ದರೆ ಶಿಕ್ಷಕರಿಲ್ಲ. ಶಿಕ್ಷಕರಿದ್ದರೆ ವಿದ್ಯಾರ್ಥಿಗಳಿಲ್ಲ. ಇಬ್ಬರಿದ್ದರು ಶಾಲಾ ಕೊಠಡಿಗಳಿಲ್ಲ. ಇಂಥ ದುಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಯಾವ ಸರ್ಕಾರವೂ ಇದರ ಬಗ್ಗೆ ಗಂಭೀರವಾದ ಚಿಂತನೆಗಳನ್ನು ಮಾಡುತ್ತಿಲ್ಲ. ಬಡ, ಮಧ್ಯಮ ಮತ್ತು ಕೂಲಿಕಾರ್ಮಿಕರ ಮಕ್ಕಳು ಬುಡಕಟ್ಟು ಜನಾಂಗ ಅಲೆಮಾರಿ ಜನಾಂಗ, ಸ್ಲಂ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಾರೆ. ಆದರೆ ಶ್ರೀಮಂತರ, ಶಾಸಕರ, ಸಚಿವರ, ಉದ್ಯಮಿಗಳ ಮಕ್ಕಳು ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಕರ್ನಾಟಕ ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಮುಚ್ಚಿರುವ ಸರಕಾರಿ ಶಾಲೆಗಳನ್ನು ಪುನರಾರಂಭಿಸುವಂತೆ ಒತ್ತಾಯಿಸಿ ನವಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನವನ್ನು ಆರಂಭಿಸಲಾಗುತ್ತದೆ ಎಂದು ಚಿತ್ರನಟಿ, ಸಮಾಜ ಸೇವಕಿ, ವಸಂತ ಲಕ್ಷ್ಮಿ ಫೌಂಡೇಶನ್ ಅಧ್ಯಕ್ಷರಾದ 2021ರ ಮಿಸ್ ಇಂಡಿಯಾ ವಿಜೇತೆ ಡಾ. ಪೂಜಾ ರಮೇಶ ಅವರು ಹೇಳಿದ್ದಾರೆ.
ಕರಾವಳಿ ತೀರದಲ್ಲಿ ಮತ್ತು ಬಂಡಿಪುರ ನಾಗರಹೊಳೆ ಭಾಗದಲ್ಲಿರುವ ಬಡ ಮಕ್ಕಳಿಗೆ ಸರ್ಕಾರಿ ಶಾಲೆಗಳ ಅವಶ್ಯಕತೆ ಇದೆ.ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಕನ್ನಡದ ಬಗ್ಗೆ ನಾವು ಮಾತನಾಡುವ ನಾವು ಕನ್ನಡ ಶಾಲೆಗಳ ಬಗ್ಗೆ ಗಂಭೀರವಾದ ಚಿಂತನೆಯನ್ನು ಮಾಡಬೇಕಾಗಿರುವುದು ಕನ್ನಡಿಗರ ಕರ್ತವ್ಯವಾಗಿದೆ. ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಕನ್ನಡ ಶಾಲೆಗಳ ಉಳಿವಿಗಾಗಿ ಮನವಿ ಸಲ್ಲಿಸಲಾಗುವುದು. ಸರ್ಕಾರಿ ಶಾಲೆಗಳು ಮುಚ್ಚಿರುವಲ್ಲಿಗೆ ಖುದ್ದಾಗಿ ಭೇಟಿ ನೀಡಿ ಸಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರಕ್ಕೆ ಮನದಟ್ಟು ಮಾಡಲಿದ್ದೇನೆ. ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಶಾಸಕರೇ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ಕಾರಣ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದಲೇ ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನವನ್ನು ಆರಂಭಿಸುತ್ತಿದ್ದೇನೆ ಎಂದು ಡಾ.ಪೂಜಾ ರಮೇಶ್ ಹೇಳಿದ್ದಾರೆ.
Kshetra Samachara
17/09/2022 04:42 pm