ಉಡುಪಿ: ಸಾರಸ್ವತ ಸಮಾಜದ ಆದ್ಯಪೀಠ ಗೋವಾದ ಕೈವಲ್ಯಪುರದಲ್ಲಿರುವ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಮಠದೊಂದಿಗೆ ಸ್ವಸಮಾಜದ ಬಾಂಧವರು ನಿರಂತರ ನಿಕಟ ಸಂಪರ್ಕವನ್ನು ಬೆಳೆಸುವ ಉದ್ದೇಶದಿಂದ ಮಠದ 17ನೇ ಶಾಖಾಮಠವನ್ನು ಆತ್ರಾಡಿ ಪರಿಕ ರಸ್ತೆಯಲ್ಲಿ ಭವ್ಯವಾಗಿ ನಿರ್ಮಿಸಲಾಗಿದೆ.ಈ ನೂತನ ಶಾಖಾ ಮಠವನ್ನು ಶ್ರೀ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀ ಮಹಾರಾಜ್ ಅವರು ಡಿ.11ರಂದು ಸಂಜೆ 3 ಗಂಟೆಗೆ ತಮ್ಮ ದಿವ್ಯಹಸ್ತದಿಂದ ತಮ್ಮ ಆರಾಧ್ಯ ಮೂರ್ತಿ ಶ್ರೀ ಭವಾನೀ ಶಂಕರ ದೇವರಿಗೆ ಆ ಮೂಲಕ ಸಾರಸ್ವತ ಸಮಾಜಕ್ಕೆ ಅರ್ಪಣೆ ಮಾಡಲಿದ್ದಾರೆ ಎಂದು ಸಮಾಜದ ಮುಖಂಡರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ,ಈ ಶುಭ ಸಮಾರಂಭದಲ್ಲಿ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಉಡುಪಿಯ ಶಾಸಕರಾದ ಕೆ.ರಘುಪತಿ ಭಟ್ ಮತ್ತು ಕಾಪು ಶಾಸಕರಾದ ಲಾಲಾಜಿ ಮೆಂಡನ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಸ್ವಾಮೀಜಿ ಅವರು ಡಿ.10ರಂದು ಸಂಜೆ ಶ್ರೀಮಠವನ್ನು ಪ್ರವೇಶಗೈಯ್ಯಲಿದ್ದಾರೆ. ಈ ಪ್ರಯುಕ್ತ ಅವರನ್ನು ಸಂಜೆ 4.30 ಗಂಟೆಗೆ ಪರ್ಕಳ ಹೈಸ್ಕೂಲು ಬಳಿಯಿಂದ ಭವ್ಯವಾದ ಶೋಭಾಯಾತ್ರೆಯ ಮೂಲಕ ಶ್ರೀಮಠಕ್ಕೆ ಕರೆತರಲಾಗುತ್ತದೆ. ಸ್ವಾಮೀಜಿ ಅವರು ಡಿ.17ರವರೆಗೆ ನೂತನ ಶಾಖಾ ಮಠದಲ್ಲಿ ಮೊಕ್ಕಾಂ ಇರಲಿದ್ದು, ಶ್ರೀ ಭವಾನೀ ಶಂಕರ ದೇವರ ಪೂಜೆ, ಶ್ರೀಗಳಿಗೆ ಭಿಕ್ಷಾ ಪ್ರದಾನ, ಪಾದ್ಯಪೂಜೆ ಇತ್ಯಾದಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ್ ವಾಗ್ಳೆ ಅಧ್ಯಕ್ಷರು, ಕೈವಲ್ಯ ಶಾಖಾ ಮಠ, ಶ್ರೀಶಾ ನಾಯಕ್ ಪೆರ್ಣಂಕಿಲ ನಿಕಟಪೂರ್ವ ಅಧ್ಯಕ್ಷರು, ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಮಣಿಪಾಲ,ರಮೇಶ್ ಸಾಲ್ವಂಕಾರ್ ,ಆಡಳಿತ ಮೊಕ್ತೇಸರರು, ನರಸಿಂಗೆ ನರಸಿಂಹ ದೇವಸ್ಥಾನ, ಶಶಿಧರ ವಾಗ್ಳೆ ನಿತ್ಯಾನಂದ ನಾಯಕ್ ,ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.
Kshetra Samachara
08/12/2021 02:54 pm