ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜನವರಿ 31ರಿಂದ ಜಾರಿಗೆ ಬರುವಂತೆ ಫೆ.15ರವರೆಗೆ ಈ ಕೆಳಗಿನಂತೆ ಮಾರ್ಗಸೂಚಿ/ನಿಬಂಧನೆಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂವನ್ನು ಜ.31ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಪಬ್‌ಗಳು/ ಕ್ಲಬ್‌ಗಳು/ಹೋಟೆಲ್‌ಗಳು/ರೆಸ್ಟೋರೆಂಟ್‌ಗಳು/ ಬಾರ್‌ಗಳು/ಹೋಟೆಲ್‌ಗಳಲ್ಲಿನ ತಿನಿಸು ಕೇಂದ್ರಗಳು ಇತ್ಯಾದಿಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ.100 ಸಾಮರ್ಥ್ಯದೊಂದಿಗೆ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯ ನಿರ್ವಹಿಸಬಹುದಾಗಿದೆ. ಈ ಎಲ್ಲಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು 2 ಡೋಸ್ ಕೋವಿಡ್ ವ್ಯಾಕ್ಸಿನ್‌ನ್ನು ಪಡೆದಿರತಕ್ಕದ್ದು. ಈ ಸ್ಥಳಗಳಲ್ಲಿ ವ್ಯಾಕ್ಸಿನ್ ಪಡೆಯದೇ ಇರುವ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಸಿನಿಮಾ ಹಾಲ್‌ಗಳು/ಮಲ್ಟಿಫ್ಲೆಕ್ಸ್‌ಗಳು/ಥಿಯೇಟರ್‌ಗಳು/ ರಂಗಮಂದಿರ ಗಳು/ಸಭಾಂಗಣಗಳು ಮತ್ತು ಇಂತಹ ಇನ್ನಿತರೆ ಸ್ಥಳಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ.50 ಸಾಮರ್ಥ್ಯದೊಂದಿಗೆ ಕೋವಿಡ್-19 ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಇಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು 2 ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು. ಈ ಸ್ಥಳಗಳಲ್ಲಿ ವ್ಯಾಕ್ಸಿನ್ ಪಡೆಯದೇ ಇರುವ ವ್ಯಕ್ತಿಗಳ ಪ್ರವೇಶ ವನ್ನು ನಿರ್ಬಂಧಿಸಲಾಗಿದೆ.
ಮದುವೆ ಸಮಾರಂಭಗಳಲ್ಲಿ ಕೋವಿಡ್-19 ಮತ್ತು ರಾಜ್ಯ ಸರಕಾರವು ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಹೊರಾಂಗಣ ಪ್ರದೇಶಗಳಲ್ಲಿ 300 ಜನರಿಗೆ ಹಾಗೂ ಒಳಾಂಗಣ ಪ್ರದೇಶಗಳಲ್ಲಿ 200 ಜನರು ಭಾಗವಹಿಸಲು ಸೀಮಿತಗೊಳಿಸಿ ಅನುಮತಿಸಲಾಗಿದೆ.
ಸಭೆ, ಸಮಾರಂಭಗಳಿಗೆ ನಿರ್ಬಂಧ: ಧಾರ್ಮಿಕ ಸ್ಧಳಗಳಲ್ಲಿ ದರ್ಶನಕ್ಕೆ ಮತ್ತು ಸೇವೆಗೆ ಮಾತ್ರ ತೆರೆಯಲು ಅವಕಾಶವಿದೆ. ಏಕಕಾಲದಲ್ಲಿ 2 ಡೋಸ್ ಲಸಿಕೆಯನ್ನು ಪಡೆದಿರುವ 50 ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವುದು. ಸಾಮಾಜಿಕ, ಧಾರ್ಮಿಕ, ರಾಜಕೀಯ ಪ್ರತಿಭಟನೆಗಳು, ಎಲ್ಲಾ ರ‍್ಯಾಲಿಗಳು, ಧರಣಿ, ಸಭೆಗಳು, ಎಲ್ಲಾ ತರಹದ ಮೆರವಣಿಗೆಗಳನ್ನು ನಿರ್ಬಂಧಿಸಲಾಗಿದೆ.
Kshetra Samachara
31/01/2022 08:27 pm