ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳಗುಂಬ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಜೆಡಿಎಸ್ ಗೆ ಒಲಿದಿದೆ . ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿಗೆ ಸೋಲಾಗಿದ್ದು, ಮಾಜಿ ಶಾಸಕ ಸುರೇಶ್ ಗೌಡರಿಗೆ ತೀವ್ರ ಮುಖಭಂಗವಾಗಿದೆ.
ಬೆಳಗುಂಬ ಜೆಡಿಎಸ್ ಉಸ್ತುವಾರಿ ಎನ್.ಹರೀಶ್ ಅವರ ಚಾಣಾಕ್ಷತನದಿಂದ ಬೆಳಗುಂಬ ಪಂಚಾಯ್ತಿ ಪಟ್ಟ ಜೆಡಿಎಸ್‌ಗೆ ಒಲಿದಿದೆ. ಆಪರೇಷನ್ ಜೆಡಿಎಸ್ ನಡೆಸಿ ಬಿಜೆಪಿಗೆ ಭಾರಿ ಹೊಡೆತ ನೀಡಿದ್ದಾರೆ. 18 ಸದಸ್ಯ ಬಲದ ಬೆಳಗುಂಬ ಪಂಚಾಯ್ತಿಯಲ್ಲಿ 12 ಬಿಜೆಪಿ ಸದಸ್ಯರು, 6 ಜೆಡಿಎಸ್ ಸದಸ್ಯರಿದ್ದರು. ಶಾಸಕ ಗೌರಿಶಂಕರ್ ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿಯ 4 ಸದಸ್ಯರು ಜೆಡಿಎಸ್ ಪರವಾಗಿ ಮತ ಚಲಾಯಿಸಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಈ ವೇಳೆ ಶಾಸಕ ಡಿ.ಸಿ ಗೌರಿಶಂಕರ್ ಮಾತನಾಡಿ, ನನ್ನ ಮೇಲೆ ವಿಶ್ವಾಸ ಇಟ್ಟಿರುವ ಬೆಳಗುಂಬ ಗ್ರಾಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಸುವೆ. ಈ ಗ್ರಾಮ ಪಂಚಾಯ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿ, ಜನರನ್ನು ಪ್ರೀತಿ ಪೂರ್ವಕವಾಗಿ ಮಾತನಾಡಿಸಿ ಸಮಸ್ಯೆ ನಿವಾರಿಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಾನು ಕೂಡ ಪಂಚಾಯ್ತಿ ಅಭಿವೃದ್ಧಿಗೆ ಒತ್ತು ನೀಡಿ ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದರು.
ಇಲ್ಲಿನ ಪಿಡಿಒ ತಮ್ಮ ಕಾರ್ಯ ವೈಖರಿ ಬದಲಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಬೇಕು, ಸದಸ್ಯರು, ಅಧ್ಯಕ್ಷರೊಂದಿಗೆ ಸೇರಿ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ್ ಮಾತನಾಡಿ, ನನ್ನ ಗೆಲುವಿಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಬಾರಿಯಾಗಿರುತ್ತೇನೆ, ಪಂಚಾಯ್ತಿಯಲ್ಲಿ ಉತ್ತಮ ಕೆಲಸ ಮಾಡುವ ಗುರಿ ಹೊಂದಿದ್ದು, ಶಾಸಕ ಗೌರಿಶಂಕರ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಕೈಗೆಳ್ಳುತ್ತೇನೆ ಎಂದು ತಿಳಿಸಿದರು.
ಈ ವೇಳೆ ಬೆಳಗುಂಬ ಪಂಚಾಯ್ತಿ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
PublicNext
06/10/2022 10:15 pm