ನವದೆಹಲಿ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ವಿಶ್ವ ಕ್ರಿಕೆಟ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಭರ್ಜರಿ ಗೆಲುವಿನ ನಗೆ ಬೀರಿದ ಭಾರತಕ್ಕೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.
ದೇಶಾದ್ಯಂತ ಈ ಜಯವನ್ನು ಭಾರತೀಯರು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಾಕ್ 19.5 ಓವರ್ಗಳಲ್ಲಿ 147 ರನ್ ಗಳಿಸಿ ಸರ್ವಪತನ ಕಂಡಿತು. ಪಾಕ್ ನೀಡಿದ ಗುರಿ ಬೆನ್ನತ್ತಿದ ಭಾರತ 19.5
ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಕಲೆ ಹಾಕುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು.
ಟೀಮ್ ಇಂಡಿಯಾ ಪರ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಕಣಕ್ಕಿಳಿದರು. ಆದರೆ, ರಾಹುಲ್ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಕೇವಲ 12 ರನ್ ಗಳಿಸಿ ಔಟಾಗಿದ್ದು, ಭಾರತ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು.
ಭಾರತದ ಪರ ಮಿಂಚಿನ ಬೌಲಿಂಗ್ ದಾಳಿ ಮಾಡಿದ ಭುವನೇಶ್ವರ್ ಪ್ರಮುಖ 4 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಹಾಗೂ ಅರ್ಶದೀಪ್ ಸಿಂಗ್ 2 ವಿಕೆಟ್ ಉರುಳಿಸುವ ಮೂಲಕ ಪಾಕ್ ಆಟಗಾರರನ್ನು ಕಾಡಿದರು. ಅವೇಶ್ ಖಾನ್ ಒಂದು ವಿಕೆಟ್ಗೆ ತೃಪ್ತಿಪಟ್ಟುಕೊಂಡರು.
PublicNext
29/08/2022 12:07 pm