ಕೊರೊನಾ ಸೋಂಕಿಗೆ ಒಳಗಾಗಿರುವ ಹಿಟ್ ಮ್ಯಾನ್ ಸದ್ಯ ಐಸೋಲೇಷನ್ ನಲ್ಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರನ್ನು ಇಂಗ್ಲೆಂಡ್ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಿಂದ ಕೈ ಬಿಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಉಪನಾಯಕ ಜಸ್ ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.
ಈ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಸಭೆ ನಡೆಸಿದ್ದು, ಇದೇ ವೇಳೆ ತಂಡದ ಜವಾಬ್ದಾರಿವಹಿಸಿಕೊಳ್ಳುವಂತೆ ಜಸ್ ಪ್ರೀತ್ ಬುಮ್ರಾ ಅವರಿಗೆ ತಿಳಿಸಲಾಗಿದೆ. ಅಲ್ಲದೆ ತಂಡದ ಇತರ ಸದಸ್ಯರಿಗೆ ಬದಲಾವಣೆ ಬಗ್ಗೆ ಅಧಿಕೃತವಾಗಿ ತಿಳಿಸಲಾಗಿದೆ. ರೋಹಿತ್ ಶರ್ಮಾ ಅವರ ಕೊರೊನಾ ಪರೀಕ್ಷೆಯ ಫಲಿತಾಂಶದ ಮಾಹಿತಿಯನ್ನು ಟೀಮ್ ಮ್ಯಾನೇಜ್ಮೆಂಟ್ ಬಹಿರಂಗಪಡಿಸಿಲ್ಲ.
ಕೆಲ ಮೂಲಗಳ ಮಾಹಿತಿ ಪ್ರಕಾರ, ಗುರುವಾರ ಮತ್ತೊಮ್ಮೆ ರೋಹಿತ್ ಶರ್ಮಾ ಕೊರೊನಾ ಟೆಸ್ಟ್ ಗೆ ಒಳಗಾಗಲಿದ್ದಾರೆ. ಅವರ RT-PCR ಟೆಸ್ಟ್ ಎರಡು ಬಾರಿ ನೆಗೆಟಿವ್ ಬಂದರೆ ಮಾತ್ರ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಜುಲೈ 1 ರಿಂದ ಶುರುವಾಗಲಿರುವ ಟೆಸ್ಟ್ ಗೆ ಅವರ ಲಭ್ಯತೆಯನ್ನು ನಿರ್ಧರಿಸಲಾಗುವುದಿಲ್ಲ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.
ಬಿಸಿಸಿಐನ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಅವರು ಈ ಬಗ್ಗೆ ಚರ್ಚಿಸಲೆಂದೇ ಬರ್ಮಿಂಗ್ಹ್ಯಾಮ್ ತೆರಳಿದ್ದು, ಆ ಬಳಿಕ ಟೀಮ್ ಮ್ಯಾನೇಜ್ಮೆಂಟ್ ಜೊತೆ ಚರ್ಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
PublicNext
29/06/2022 06:40 pm