ನವದೆಹಲಿ: ಈ ತಿಂಗಳಾಂತ್ಯದಲ್ಲಿ ಐರ್ಲೆಂಡ್ ವಿರುದ್ಧ ನಡೆಯುವ 2 ಪಂದ್ಯಗಳ ಟಿ20 ಸರಣಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಐಪಿಎಲ್ನಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಪಾಂಡ್ಯಾಗೆ ಭಾರತ ತಂಡವನ್ನು ಮುನ್ನಡೆಸುವ ಮಹತ್ತರ ಹೊಣೆಗಾರಿಕೆಯನ್ನು ಬಿಸಿಸಿಐ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಹಿರಿಯರಿಗೆ ವಿಶ್ರಾಂತಿ ನೀಡಿದ ಕಾರಣ ಸ್ಟಾರ್ ಬ್ಯಾಟರ್ ಕೆ.ಎಲ್.ರಾಹುಲ್ ನಾಯಕತ್ವದ ಹೊಣೆ ಹೊತ್ತಿದ್ದರು. ಆದರೆ ದುರಾದೃಷ್ಟವಶಾತ್ ಸರಣಿಗೆ ಆರಂಭಕ್ಕೂ ಮುಂಚೆ ಗಾಯಗೊಂಡು ಹೊರಬಿದ್ದಿದ್ದರು. ಈ ವೇಳೆ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಕ್ಯಾಪ್ಟನ್ ಜವಾಬ್ದಾರಿ ನೀಡಲಾಗಿದೆ. ಪಂತ್ ನೇತೃತ್ವದ ಭಾರತದ ಪಡೆ 5 ಪಂದ್ಯಗಳ ಸರಣಿಯಲ್ಲಿ ಹರಿಣಗಳ ವಿರುದ್ಧ 2-1 ರಿಂದ ಹಿನ್ನಡೆಯಲ್ಲಿದೆ.
ಈ ಸರಣಿಯ ಬಳಿಕ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನಾಡಲು ಇಂಗ್ಲೆಂಡ್ ಪ್ರವಾಸ ಮಾಡಲಿದ್ದಾರೆ. ಇದಕ್ಕೂ ಮೊದಲು ಐರ್ಲೆಂಡ್ ವಿರುದ್ಧ ಜೂನ್ 26, 28ರಂದು 2 ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಟೆಸ್ಟ್ ಸರಣಿಗೆ ಸಜ್ಜಾಗಲು ಎಲ್ಲ ಹಿರಿಯ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯಾಗೆ ತಂಡದ ನೇತೃತ್ವ ವಹಿಸಲಾಗಿದೆ. ಇದೇ ವೇಳೆ ತಂಡವನ್ನು ಪ್ರಕಟಿಸಲಾಗಿದೆ.
ತಂಡ ಹೀಗಿದೆ: ಹಾರ್ದಿಕ್ ಪಾಂಡ್ಯಾ(ನಾಯಕ), ಭುವನೇಶ್ವರ್ ಕುಮಾರ್(ಉಪ ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್ ) ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್.
PublicNext
15/06/2022 09:52 pm