ಮುಂಬೈ: ಅನುಜ್ ರಾವತ್ ಅರ್ಧಶತಕ, ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಐಪಿಎಲ್ 2022ರ ಭಾಗವಾಗಿ ಪುಣೆಯಲ್ಲಿ ಇಂದು ನಡೆದ 18ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸ್ಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 6 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು.
152 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಆರ್‌ಸಿಬಿ 9 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲುವಿನ ನಗೆ ಬೀರಿದೆ. ತಂಡದ ಪರ ಅನುಜ್ ರಾವತ್ 66 ರನ್ (47 ಎಸೆತ, 2 ಬೌಂಡರಿ, 6 ಸಿಕ್ಸ್) ಹಾಗೂ ವಿರಾಟ್ ಕೊಹ್ಲಿ 48 ರನ್ ಗಳಿಸಿದರು.
ಇದಕ್ಕೂ ಮುನ್ನ ಮುಂಬೈ ಪರ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸ್ ಸೇರಿ 68 ರನ್ ಚಚ್ಚಿದ್ದರು. ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ತಲಾ 26 ರನ್ ಗಳಿಸಿದ್ದರು. ಇನ್ನು ಆರ್‌ಸಿಬಿ ಪರ ವನಿಂದು ಹಸರಂಗ ಡಿ ಸಿಲ್ವ ಹಾಗೂ ಹರ್ಷಲ್ ಪಟೇಲ್ ತಲಾ 2 ವಿಕೆಟ್ ಉರುಳಿಸಿದ್ದರೆ, ಅಕ್ಷ ದೀಪ್ 1 ವಿಕೆಟ್ ಪಡೆಯುವ ಜೊತೆಗೆ ರನ್ ಮೇಲೆ ಹಿಡಿತ ಸಾಧಿಸಿದ್ದರು. ಇಂದಿನ ಪಂದ್ಯದಲ್ಲೂ ಮೊಹಮ್ಮದ್ ಸಿರಾಜ್ ದುಬಾರಿಯಾಗಿದ್ದರು. ಅವರು 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೆ 51 ರನ್ ನೀಡಿದ್ದರು.
PublicNext
09/04/2022 11:25 pm