ದುಬೈ: ಶುಭ್ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ವಿಕೆಟ್ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್‌ಗಳ ವಿಕೆಟ್ ಕಿತ್ತು ಬಹುಬೇಗ ಫೆವಿಲಿನ್‌ಗೆ ಅಟ್ಟುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 27 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 3 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಕೆಕೆಆರ್ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಕೆಕೆಆರ್ ಆರಂಭಿಕ ಬ್ಯಾಟರ್‌ಗಳಾದ ಶುಭ್ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಅಬ್ಬರವು ಗೆಲುವಿನ ನಿರೀಕ್ಷೆ ಮೂಡಿಸಿತ್ತು. ಈ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 91 ರನ್ ಸಿಡಿಸಿತ್ತು. 50 ರನ್ ಚಚ್ಚಿದ್ದ ವೆಂಕಟೇಶ್ ಅಯ್ಯರ್ ಬಿರುಸಿನ ಆಟಕ್ಕೆ ಮುಂದಾಗಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾಗೆ ಕ್ಯಾಚ್ ಒಪ್ಪಿಸಿದರು. ಆ ಬಳಿಕ ಬಂದ ನಿತೀಶ್ ರಾಣಾ (0 ರನ್) ಹಾಗೂ ಸುನಿಲ್ ನರೈನ್ (2 ರನ್) ಬಹುಬೇಕ ವಿಕೆಟ್ ಕಳೆದುಕೊಂಡರು.
ಶುಭ್ಮನ್ ಗಿಲ್ ಅರ್ಧ ಶತಕದ (51 ರನ್) ಬಳಿಕ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗಿ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಮರಳಿದರು. ನಾಯಕ ಇಯಾನ್ ಮಾರ್ಗನ್ (4 ರನ್) ಹಾಗೂ ದಿನೇಶ್ ಕಾರ್ತಿನ್ (9 ರನ್) ನಿರಾಸೆ ಮೂಡಿಸಿದರು. ಸಾಲು ಸಾಲು ವಿಕೆಟ್ ಹೋಗಿದ್ದೇ ಕೆಕೆಆರ್ ಸೋಲಿಗೆ ಕಾರಣವಾಯಿತು. ಕೊನೆಯಲ್ಲಿ ಶಿವಂ ಮಾವಿ 13 ಎಸೆತಗಳಲ್ಲಿ 20 ರನ್ ಗಳಿಸಲುವ ಮೂಲಕ ಸೋಲಿನ ಅಂತರ ತಗ್ಗಿಸಿದರು.
ಇನ್ನು ಚೆನ್ನೈ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತು ಮಿಂಚಿದರೆ, ರವೀಂದ್ರ ಜಡೇಜಾ ಹಾಗೂ ಜೋಶ್ ಹಾಜಲ್‌ವುಡ್ ತಲಾ 2 ವಿಕೆಟ್ ಉರುಳಿಸಿದರು. ಜೊತೆಗೆ ದೀಪಕ್ ಚಹಾರ್ ಹಾಗೂ ಡ್ವೇನ್ ಬ್ರಾವೋ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಆಸರೆಯಾದರು.
ಇದಕ್ಕೂ ಮುನ್ನ ಚೆನ್ನೈ ಪರ ಫಾಫ್ ಡು ಪ್ಲೆಸಿಸ್ 86 ರನ್, ಋತುರಾಜ್ ಗಾಯಕವಾಡ್ 32 ರನ್, ರಾಬಿನ್ ಉತ್ತಪ್ಪ 31 ರನ್ ಹಾಗೂ ಮೊಯೀನ್ ಅಲಿ 37 ರನ್ ಚಚ್ಚಿದ್ದರು. ಇನ್ನು ಕೆಕೆಆರ್ ಪರ ಸುನಿಲ್ ನರೈನ್ 2 ವಿಕೆಟ್ ಉರುಳಿಸಿದ್ದರೆ, ಶಿವಂ ಮಾವಿ ಒಂದು ವಿಕೆಟ್ ಪಡೆದುಕೊಂಡಿದ್ದರು.
PublicNext
15/10/2021 11:32 pm