ದುಬೈ : ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದೆ. ಮಹತ್ವದ ಪಂದ್ಯದಲ್ಲಿ ಆರ್ ಸಿಬಿ 6 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿದೆ. ಈ ಮೂಲಕ IPL 2021 ಎರಡನೇ ಭಾಗದಲ್ಲಿ ಆರ್ ಸಿಬಿ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಲಯಕ್ಕೆ ಮರಳಿದೆ.
ಎರಡನೇ ಓವರ್ ನಲ್ಲೇ ದೇವದತ್ ವಿಕೆಟ್ ಪತನಗೊಂಡಿದೆ. ಪಡಿಕ್ಕಲ್ ಡಕೌಟ್ ಆದರು. 7 ರನ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ವಿಕೆಟ್ ಪತನಗೊಂಡಿತು. ಆದರೆ ನಾಯಕ ವಿರಾಟ್ ಕೊಹ್ಲಿ ಇಂದು ಈ ಹಿಂದಿನ ಕಳಪೆ ಪ್ರದರ್ಶನಕ್ಕೆ ಬ್ಯಾಟ್ ಮೂಲಕ ಉತ್ತರ ನೀಡಲು ರೆಡಿಯಾಗಿದ್ದರು.
ಕೊಹ್ಲಿ ಹಾಗೂ ಎಸ್ ಭರತ್ ಜೊತೆಯಾಟ ಆರ್ ಸಿಬಿ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿತು. ಎರಡನೇ ವಿಕೆಟ್ಗೆ ಈ ಜೋಡಿ 68 ರನ್ ಜೊತೆಯಾಟ ನೀಡಿತು. ಭರತ್ 32 ರನ್ ಸಿಡಿಸಿ ಔಟಾದರು. ಇತ್ತ ಕೊಹ್ಲಿ ಆರ್ಭಟ ಮುಂದುವರಿಯಿತು. ಗ್ಲೆನ್ ಮ್ಯಾಕ್ಸ್ವೆಲ್ ಜೊತೆ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಿದರು.
ಅಬ್ಬರಿಸಿದ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿದರು. ಈ ಮೂಲಕ ಸತತ 2ನೇ ಹಾಫ್ ಸೆಂಚುರಿ ದಾಖಲಿಸಿದರು. ಮ್ಯಾಕ್ಸ್ ವೆಲ್ ಕೂಡ ಉತ್ತಮ ಸಾಥ್ ನೀಡಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಕೊಹ್ಲಿ ವಿಕೆಟ್ ಪತನಗೊಂಡಿದೆ.
ಕೊಹ್ಲಿ 51 ರನ್ ಸಿಡಿಸಿ ಔಟಾದರು. ಬಳಿಕ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಹೋರಾಟ ಆರ್ ಸಿಬಿ ತಂಡಕ್ಕೆ ನೆರವಾಯಿತು. ಕೊಹ್ಲಿ ವಿಕೆಟ್ ಪತನದ ಬಳಿಕ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಅಬ್ಬರ ಜೋರಾಯಿತು. ಮ್ಯಾಕ್ಸ್ ವೆಲ್ ಕೂಡ ಹಾಫ್ ಸೆಂಚುರಿ ದಾಖಲಿಸಿದರು. ಮ್ಯಾಕ್ಸ್ ವೆಲ್ 56 ರನ್ ಸಿಡಿಸಿ ಔಟಾದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಸ್ಥಾನದ ರೇಸ್ ಮತ್ತಷ್ಟು ಪೈಪೋಟಿಯಿಂದ ಕೂಡಿದೆ. ಹೀಗಾಗಿ ಇಂದಿನ ಪಂದ್ಯದ ಗೆಲುವು ಮುಖ್ಯವಾಗಿದೆ.
PublicNext
26/09/2021 09:31 pm