ಶಾರ್ಜಾ: ಭಾರೀ ಕುತೂಹಲದ ಹಾದಿಯಲ್ಲಿ ಸಾಗಿದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 5 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.
ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಡೆಯುತ್ತಿರುವ 36ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು. 126 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 7ವಿಕೆಟ್ ನಷ್ಟಕ್ಕೆ 120 ರನ್ ಗಳಿಸಲು ಶಕ್ತವಾಯಿತು. ತಂಡದ ಪರ ಮೂರು ವಿಕೆಟ್ ಪಡೆದು ಮಿಂಚಿದ್ದ ಜೇಸನ್ ಹೋಲ್ಡರ್ ಸ್ಫೋಟಕ ಬ್ಯಾಟಿಂಗ್ (47 ರನ್, 29 ಎಸೆತ, 5 ಸಿಕ್ಸರ್) ತೋರಿದರು. ಆದರೆ ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಪಂಜಾಬ್ ಪರ ರವಿ ಬಿಷ್ಣೋಯಿ 3 ವಿಕೆಟ್ ಪಡೆದು ಮಿಂಚಿದರೆ, ಅನುಭವಿ ಬೌಲರ್ ಮೊಹಮ್ಮದ್ ಶಮಿ 2 ವಿಕೆಟ್ ಹಾಗೂ ಅರ್ಷದೀಪ್ ಸಿಂಗ್ 1 ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಪಂಜಾಬ್ ಪರ ನಾಯಕ ಕೆ.ಎಲ್.ರಾಹುಲ್ (21 ರನ್) ಹಾಗೂ ಐಡೆನ್ ಮಾರ್ಕ್ರಮ್ (27 ರನ್) ಗಳಿಸಿದ್ದರು. ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾಗಿದ್ದರು. ಪರಿಣಾಮ ಪಂಜಾಬ್ ತಂಡವು 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು.
ಇನ್ನು ಹೈದರಾಬಾದ್ ತಂಡದ ಪರ ಜೇಸನ್ ಹೋಲ್ಡರ್ 3 ವಿಕೆಟ್ ಕಿತ್ತು ಮಿಂಚಿದ್ದರು. ಉಳಿದಂತೆ ಸಂದೀಪ್ ಶರ್ಮಾ, ಅಬ್ದುಲ್ ಸಮದ್, ರಶೀದ್ ಖಾನ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು.
PublicNext
25/09/2021 11:17 pm