ದುಬೈ: ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಐಪಿಎಲ್ 14ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್ ಪಂದ್ಯಗಳ ಆರಂಭಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ತಂಡಗಳ ಆಟಗಾರರು ಕೂಡ ಈಗ ದುಬೈ ತಲುಪಿದ್ದು, ಟೂರ್ನಿಗೆ ಸಜ್ಜಾಗುತ್ತಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ನಾಯಕ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಕೋಚ್ ಅನಿಲ್ ಕುಂಬ್ಳೆ ತಂಡದಲ್ಲಿದ್ದಾರೆ. ಆಟಗಾರರು ಅಭ್ಯಾಸದ ಬಳಿಕ ಸಂಜೆಯಲ್ಲಿ ಮನರಂಜನೆಯ ಮೊರೆ ಹೋಗುತ್ತಿದ್ದಾರೆ. ಈ ಮೋಜು ಮಸ್ತಿ ಸಮಯದಲ್ಲಿ ರಸಸಂಜೆ ಕಾರ್ಯಕ್ರಮವನ್ನು ಸೃಷ್ಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ತಂಡದ ಕೋಚ್ ಅನಿಲ್ ಕುಂಬ್ಳೆ, ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಸೇರಿದಂತೆ ಅನೇಕರು ತಮ್ಮ ಹಾಡುಗಾರಿಕೆ ಮೂಲಕ ಆಟಗಾರರಿಗೆ ಮನರಂಜನೆ ಒದಗಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಕನ್ನಡ ಹಾಡನ್ನೂ ಸಹ ಹಾಡುವ ಮೂಲಕ ಕೇಳುಗರ ಮನಕ್ಕೆ ಮುದ ನೀಡಿದರು. ಅದರಲ್ಲೂ ಕರ್ನಾಟಕದ ಅಭಿಮಾನಿಗಳ ಹೃದಯ ಗೆದಿದ್ದಾರೆ.
ಇದರ ವಿಡಿಯೋ ಈಗ ವೈರಲ್ ಆಗುತ್ತಿದ್ದು ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ. ವಿಷ್ಣುವರ್ಧನ್ ಅಭಿನಯದ ದೇವರ ಗುಡಿ ಚಿತ್ರದ ಮಾಮರವೆಲ್ಲೋ ಕೋಗಿಲೆ ಎಲ್ಲೋ ಎಂಬ ಹಾಡನ್ನು ಕುಂಬ್ಳೆ ಅವರು ಲೋಕಾಭಿರಾಮವಾಗಿ ಹಾಡಿದ್ದಾರೆ. ಅಂದ್ ಹಾಗೆ ಚಿ. ಉದಯ ಶಂಕರ್ ಬರೆದಿರುವ ಈ ಹಾಡಿಗೆ ರಾಜನ್ ನಾಗೇಂದ್ರ ಸಂಗೀತ ನೀಡಿದ್ದರು. ಗಾನಮಾಂತ್ರಿಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಈ ಹಾಡನ್ನ ಒಮ್ಮೆ ಅನಿಲ್ ಕುಂಬ್ಳೆ ಅವರ ಧ್ವನಿಯಲ್ಲೂ ಕೇಳಿ..
PublicNext
14/09/2021 11:05 pm