ತಿರುವನಂತಪುರಂ: ಓಟದ ರಾಣಿ ಪಿ.ಟಿ.ಉಷಾರ ಕ್ರೀಡಾ ತರಬೇತುದಾರ ಒಥಯೋತು ಮಾಧವನ್ ನಂಬಿಯಾರ್ (89) ಇಂದು ಕೊನೆಯುಸಿರೆಳೆದಿದ್ದಾರೆ. ಕ್ರೀಡಾಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ.
15 ವರ್ಷಗಳ ಕಾಲ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಂಬಿಯಾರ್ ಅವರು, 1970ರಲ್ಲಿ ನಿವೃತ್ತರಾಗಿದ್ದರು. 1968ರಲ್ಲಿ ಎನ್ಐಎಸ್- ಪಟಿಯಾಲದಿಂದ ಕೋಚಿಂಗ್ ಡಿಪ್ಲೊಮಾ ಪಡೆದಿದ್ದ ನಂಬಿಯಾರ್, 1971ರಲ್ಲಿ ಕೇರಳ ಕ್ರೀಡಾ ಮಂಡಳಿಗೆ ಸೇರಿದ್ದರು. ಪಿ.ಟಿ.ಉಷಾ ಹಾಗೂ ಅಂತರರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟುಗಳಾದ ಶೈನಿ ವಿಲ್ಸನ್ (ನಾಲ್ಕು ಬಾರಿ ಒಲಿಂಪಿಯನ್ ಮತ್ತು 1985 ಏಷ್ಯಾ ಚಾಂಪಿಯನ್‌ಶಿಪ್ 800 ಮೀ ಓಟದಲ್ಲಿ ಚಿನ್ನದ ಪದಕ ವಿಜೇತೆ), ವಂದನಾ ರಾವ್ ಸೇರಿ ಹಲವರಿಗೆ ನಂಬಿಯಾರ್ ಕ್ರೀಡಾ ತರಬೇತಿ ನೀಡಿದ್ದಾರೆ.
ಮೊದಲ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿಯೂ ಸಂದಿತ್ತು. ಕೋಯಿಕ್ಕೋಡ್ ಜಿಲ್ಲೆಯ ವಡಗರದಲ್ಲಿ ವಾಸಿಸುತ್ತಿದ್ದ ಅವರಿಗೆ ಪಾರ್ಕಿನ್ಸನ್ ಕಾಯಿಲೆ ಆಗಿತ್ತು. 10 ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಹೀಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
PublicNext
19/08/2021 09:27 pm