ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟರ್ ವಾಸಿಂ ಅಕ್ರಮ್ ತಮ್ಮದೇ ದೇಶದ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ 'ಟೀಂ ಇಂಡಿಯಾವನ್ನು ನೋಡಿ ಕಲಿಯಿರಿ' ಎಂದು ಪಾಕ್ ಕ್ರಿಕೆಟ್ ಮಂಡಳಿಗೆ ಚಾಟಿ ಬೀಸಿದ್ದಾರೆ.
ಪಾಕಿಸ್ತಾನವು ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡದ ವಿರುದ್ಧ ಟಿ-ಟ್ವೆಂಟಿ ಮತ್ತು ಏಕದಿನ ಸರಣಿಗಳನ್ನು ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡ ಜಿಂಬಾಬ್ವೆ ರೀತಿಯ ತಂಡದ ಮೇಲೆ ಮಾತ್ರ ಗೆಲುವು ಸಾಧಿಸಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಎದುರಾದವು.
ಈ ಕುರಿತು ವಾಸಿಂ ಅಕ್ರಂ ಪ್ರತಿಕ್ರಿಯಿಸಿದ್ದು, "ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಪದೇ ಪದೇ ಸರಣಿಗಳನ್ನು ಆಯೋಜಿಸಕಾಗುತ್ತಿದೆ. ಇದರಿಂದಾಗಿ ಪಾಕಿಸ್ತಾನವು ಬಲಿಷ್ಠ ತಂಡಗಳ ಮುಂದೆ ಮಂಕಾಗುತ್ತಿದೆ. ಹೀಗಾಗಿ ಜಿಂಬಾಬ್ವೆ ವಿರುದ್ಧ ಸರಣಿ ಆಯೋಜಿಸುತ್ತಿರುವ ಮಹಾನುಭಾವನನ್ನು ನಾನು ಭೇಟಿಯಾಗಬೇಕು ಮತ್ತು ಆತ ಮಾಡಿರುವ ಮಹತ್ಕಾರ್ಯಕ್ಕೆ ಆತನನ್ನು ಹೊಗಳಿ ಕೊಂಡಾಡಬೇಕು' ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾಲೆಳೆದಿದ್ದಾರೆ.
"ಭಾರತ ತಂಡವನ್ನು ನೋಡಿ 2 ತಂಡಗಳನ್ನು ವಿಂಗಡಿಸಿಕೊಂಡು ದೊಡ್ಡ ದೊಡ್ಡ ರಾಷ್ಟ್ರಗಳ ವಿರುದ್ಧ ಸರಣಿಗಳನ್ನು ಆಡುತ್ತಿದ್ದಾರೆ. ಒಂದು ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೆ ಮತ್ತೊಂದು ತಂಡ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದೆ. ಅವರು 10 ವರ್ಷಗಳಿಂದ ತಮ್ಮ ತಂಡವನ್ನು ಗಟ್ಟಿಗೊಳಿಸುತ್ತಾ ಬಂದು ಈ ಮಟ್ಟವನ್ನು ತಲುಪಿದ್ದಾರೆ" ಎಂದು ಹಾಡಿ ಹೊಗಳಿದ್ದಾರೆ.
PublicNext
28/07/2021 02:46 pm