ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಹರ್ನಿಶಿ ಪಂದ್ಯ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮ ಅವರಿಗೆ ವೃತ್ತಿಜೀವನದ 100ನೇ ಟೆಸ್ಟ್ ಆಗಿತ್ತು. ಭಾರತ ತಂಡ ಪಂದ್ಯದಲ್ಲಿ ಎರಡೇ ದಿನಗಳಲ್ಲಿ ಗೆದ್ದು ಇಶಾಂತ್ ಶರ್ಮಗೆ ಭರ್ಜರಿ ಉಡುಗೊರೆ ನೀಡಿತು.
ಇದರೊಂದಿಗೆ ಇನ್ನೊಂದು ಕಾರಣಕ್ಕಾಗಿಯೂ ಇಶಾಂತ್ ಶರ್ಮ ಅವರಿಗೆ ಇದು ವೃತ್ತಿಜೀವನದ ಸ್ಮರಣೀಯ ಪಂದ್ಯವೆನಿಸಿತು.
ಕಳೆದ 14 ವರ್ಷಗಳಿಂದ ಭಾರತ ತಂಡದ ಸದಸ್ಯರಾಗಿರುವ ಇಶಾಂತ್ ಶರ್ಮ ಹಿಂದಿನ 99 ಟೆಸ್ಟ್ ಗಳಲ್ಲಿ 134 ಇನಿಂಗ್ಸ್ ಗಳಲ್ಲಿ ಅವರಿಗೆ ಬ್ಯಾಟ್ ಹಿಡಿಯುವ ಅವಕಾಶ ಲಭಿಸಿತ್ತು. ಈ ವೇಳೆ ಒಂದು ಅರ್ಧಶತಕವನ್ನೂ ಅವರು ಬಾರಿಸಿದ್ದರು. ಆದರೆ ಅವರ ಬ್ಯಾಟ್ ನಿಂದ ಎಂದೂ ಸಿಕ್ಸರ್ ಸಿಡಿದಿರಲಿಲ್ಲ. ಆ ಕೊರತೆ ಗುರುವಾರ ಅಹಮದಾಬಾದ್ ನಲ್ಲಿರುವ ಕ್ರೀಡಾಂಗಣದಲ್ಲಿ ನೀಗಿತು.
ಭಾರತ ತಂಡದ ಮೊದಲ ಇನಿಂಗ್ಸ್ ವೇಳೆ ಇಶಾಂತ್ ಶರ್ಮ ಅವರು ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಎಸೆತದಲ್ಲಿ ಲಾಂಗ್ ಸಿಕ್ಸರ್ ಸಿಡಿಸಿದರು. ಇದು ಅವರು ಆಡಿದ 194 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (100 ಟೆಸ್ಟ್, 80 ಏಕದಿನ, 14 ಟಿ20) ಸಿಡಿಸಿದ ಮೊದಲ ಸಿಕ್ಸರ್ ಆಗಿದೆ.
ಇನಿಂಗ್ಸ್ ನಲ್ಲಿ ಅವರ ಅಜೇಯ 10 ರನ್ ಗಳಿಕೆ ಭಾರತದ ಇನಿಂಗ್ಸ್ ಮುನ್ನಡೆಯಲ್ಲಿಯೂ ಪ್ರಮುಖ ಪಾತ್ರವಹಿಸಿತು. ಈ ಹಿಂದೆ ಏಕದಿನದಲ್ಲಿ 28 ಮತ್ತು ಟಿ20ಯಲ್ಲಿ 3 ಇನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ಮಾಡಿದ್ದರೂ ಅವರು ಸಿಕ್ಸರ್ ಸಿಡಿಸಿರಲಿಲ್ಲ. ಆದರೆ ಪ್ರಥಮ ದರ್ಜೆ ಕ್ರಿಕೆಟ್ ನ 144 ಪಂದ್ಯಗಳಲ್ಲಿ 4 ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ.
PublicNext
26/02/2021 02:18 pm