ಚಂಡೀಗಢ: ಇನ್ನೇನು 14ನೇ ಆವೃತ್ತಿಯ ಐಪಿಎಲ್ ಹಂಗಾಮ ಶುರುವಾಗಲಿದೆ ಅದಕ್ಕಾಗಿ ಒಂದೊಂದೆ ಕೆಲಸಗಳು ಶುರುವಾಗಿವೆ. ಸದ್ಯ ಭರ್ಜರಿ ಎಂಟ್ರಿ ಕೊಡಲು ಕಾಯುತ್ತಿರುವ ಕಿಂಗ್ಸ್ ಇಲೆವನ್ ಪಂಜಾಬ್ ತನ್ನ ಹೆಸರನ್ನು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದೆ.
ಪ್ರೀತಿ ಝಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ 14ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. ಈ ಕುರಿತು ಅಧಿಕೃತವಾಗಿ ಮಾತನಾಡಿರುವ ತಂಡದ ಸಿಇಒ ಸಂತೋಷ್ ಮೆನನ್, ಪಂಜಾಬ್ ಕಿಂಗ್ಸ್ ಹೊಸತನದಲ್ಲಿ ರೂಪುಗೊಂಡಿರುವ ಬ್ರ್ಯಾಂಡ್ ಹೆಸರಾಗಿದ್ದು, ಇದು ನಮ್ಮ ಹೊಸ ಕೋರ್ ಬ್ರ್ಯಾಂಡ್ ಹೆಸರಿಸಲು ಸೂಕ್ತವಾದ ಸಮಯವಾಗಿದೆ ಎಂದಿದ್ದಾರೆ.
ಈವರೆಗಿನ 13 ಐಪಿಎಲ್ ಆವೃತ್ತಿಯಲ್ಲಿ ಒಂದು ಬಾರಿ ರನ್ನರ್ ಅಪ್ ಹಾಗೂ ಇನ್ನೊಂದು ಬಾರಿ ಮೂರನೇ ಸ್ಥಾನ ಪಡೆದದ್ದನ್ನು ಬಿಟ್ಟರೆ ನೀರಸ ಪ್ರದರ್ಶನದ ಮೂಲಕ ಪಂಜಾಬ್ ತಂಡ ನಿರಾಸೆ ಅನುಭವಿಸಿದೆ.
ಈ ಬಾರಿಯೂ ಬಲಿಷ್ಟ ಆಟಗಾರರಾದ ಕೆ.ಎಲ್ ರಾಹುಲ್, ಮಾಯಾಂಕ್ ಅರ್ಗವಾಲ್, ಕ್ರಿಸ್ ಗೇಲ್, ನಿಕೋಲಸ್ ಪೊರನ್, ಮಂದೀಪ್ ಸಿಂಗ್, ದೀಪಕ್ ಹೂಡಾ ಜೊತೆಗೆ ಕೋಚ್ ಆಗಿ ಕನ್ನಡಿಗರಾದ ಅನಿಲ್ ಕುಂಬ್ಳೆ ತಂಡದಲ್ಲಿರುವುದು ಬಲ ಹೆಚ್ಚಿಸಿದ್ದು, ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ಹೆಸರನ್ನು ಪಂಜಾಬ್ ಕಿಂಗ್ಸ್ ಆಗಿ ಬದಲಾಯಿಸಿದ ಬಳಿಕವಾದರೂ ತಂಡದ ಅದೃಷ್ಟ ಬದಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
PublicNext
17/02/2021 08:23 pm