ನವದೆಹಲಿ: ಲೀಡ್ಸ್ನಲ್ಲಿ ನಡೆದ ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಇನಿಂಗ್ಸ್ ಹಾಗೂ 76 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹಳೆಯ ಟ್ವೀಟ್ವೊಂದು ವೈರಲ್ ಆಗಿದೆ. ಅದನ್ನು ಡಿಲೀಟ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.
2016ರಲ್ಲಿ ಟಿ20 ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದ್ದರು. ಈ ಭರ್ಜರಿ ಇನಿಂಗ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದ ಇಂಗ್ಲೆಂಡ್ನ ಮಾಜಿ ಆಲ್ರೌಂಡರ್ ಆಂಡ್ರೊ ಫ್ಲಿಂಟಾಫ್, ಕೊಹ್ಲಿ ಇದೇ ರೀತಿಯಲ್ಲಿ ಮುಂದುವರೆದರೆ ಮುಂದೊಂದು ದಿನ ಜೋ ರೂಟ್ರಂತೆ ಉತ್ತಮ ಬ್ಯಾಟ್ಸ್ಮನ್ ಆಗಲಿದ್ದಾರೆ ಎಂದು ಹೇಳಿದ್ದರು.
ಫ್ಲಿಂಟಾಫ್ ಅವರ ಈ ಟ್ವೀಟ್‌ಗೆ ಅಸಮಾಧಾನಗೊಂಡ ಅಮಿತಾಭ್ ಬಚ್ಚನ್, ಯಾರು ರೂಟ್? ಬುಡದಿಂದಲೇ ರೂಟ್ (ಬೇರು) ಕಿತ್ತು ಹಾಕುತ್ತೇವೆ ಎಂದು ರಿಟ್ವೀಟ್ ಮಾಡಿದ್ದರು. ಇದೀಗ ಆ ಹಳೇ ಟ್ವೀಟ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾ ವಿರುದ್ಧ ಜೋ ರೂಟ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ ಸರಣಿಯ ಮೂರು ಪಂದ್ಯಗಳಲ್ಲಿ ರೂಟ್ ಭಾರತದ ವಿರುದ್ಧ ಮೂರು ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಅಮಿತಾಭ್ ಬಚ್ಚನ್ ಅವರ ಟ್ವೀಟ್ ವೈರಲ್ ಆಗಿದೆ. ಕೆಲವರು ಬಿಗ್ ಬಿ ಅನ್ನು ಕಾಲೆಳೆಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅಭಿಮಾನಿಗಳು ಹಳೆಯ ಟ್ವೀಟ್ ಅನ್ನು ಡಿಲೀಟ್ ಮಾಡುವಂತೆ ಅಮಿತಾಭ್ ಬಚ್ಚನ್ ಅವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.
PublicNext
29/08/2021 03:04 pm