ಅಬುಧಾಬಿ: ಹಿಟ್‌ಮ್ಯಾನ್, ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್, ಕೊನೆಯಲ್ಲಿ ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ 192 ರನ್‌ಗಳ ಗುರಿ ನೀಡಿದೆ.
ಅಬುಧಾಬಿ ಶೇಖ್ ಝಯಾದ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ನ 13ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ನಾಯಕ ರಾಹುಲ್ ಬೌಲಿಂಗ್ ಆಯ್ದುಕೊಂಡರು. ಮುಂಬೈ ಪರ ನಾಯಕ ರೋಹಿತ್ ಶರ್ಮಾ 70 ರನ್ (45 ಎಸೆತ, 8 ಬೌಂಡರಿ, 3 ಸಿಕ್ಸರ್), ಕೀರನ್ ಪೊಲಾರ್ಡ್ 47 ರನ್ (20 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ 30 ರನ್ (11 ಎಸೆತ, 3 ಬೌಂಡರಿ, 2 ಸಿಕ್ಸರ್) ಸಹಾಯದಿಂದ 4 ವಿಕೆಟ್ ನಷ್ಟಕ್ಕೆ 191 ರನ್ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಆರಂಭದಲ್ಲೇ ಆಘಾತಕ್ಕೆ ತುತ್ತಾಯಿತು. ಕ್ವಿಂಟನ್ ಡಿ ಕಾಕ್ರನ್ನು ಮೊದಲ ಓವರ್ನಲ್ಲೇ ಪೆವಿಲಿಯನ್ಗೆ ನಡೆದರು. ಬಳಿಕ ಸೂರ್ಯಕುಮಾರ್ ಯಾದವ್ (10 ರನ್) ವಿಕೆಟ್ ಕಳೆದುಕೊಂಡರು. . ಈ ಬಳಿಕ ಜೊತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಏರಿಸಿದರು. ಕೊನೆಯಲ್ಲಿ ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಬೌಂಡರಿ, ಸಿಕ್ಸರ್ ಮಳೆ ಸುರಿಸಿದರು.
PublicNext
01/10/2020 09:35 pm