ಶಾರ್ಜಾ : ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಟಿ-20 ಚಾಲೆಂಜ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಮತಿ ಮಂದಾನ ನೇತೃತ್ವದ ಟ್ರೈಲ್ ಬ್ಲೇಜರ್ ಮತ್ತು ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ಮುಖಾಮುಖಿಯಾಗಿ ಟ್ರೈಲ್ ಬ್ಲೇಜರ್ ಗೆದ್ದು ಬಿಗಿದೆ.
ಸ್ಮತಿ ಮಂಧನಾ ನಾಯಕತ್ವದ ಟ್ರೈಲ್ ಬ್ಲೇಜರ್ ಮೊದಲ ಬಾರಿಗೆ ವನಿತಾ ಟಿ20 ಚಾಲೆಂಜ್ ಚಾಂಪಿಯನ್ ಆಗಿದೆ.
ಎರಡು ಬಾರಿ ಚಾಂಪಿಯನ್ ಆಗಿದ್ದ ಸೂಪರ್ ನೋವಾಸ್ ಗೆ 16 ರನ್ನಗಳ ಸೋಲುಣಿಸಿ ಸ್ಮತಿ ತಂಡ ಟ್ರೋಫಿಗೆ ಮುತ್ತಿಟ್ಟಿದೆ.
ಸಣ್ಣ ಮೊತ್ತದ ಈ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟ್ರೈಲ್ ಬ್ಲೇಜರ್ ಉತ್ತಮ ಆರಂಭದ ಹೊರತಾಗಿಯೂ 8 ವಿಕೆಟಿಗೆ ಕೇವಲ 118 ರನ್ ಗಳಿಸಿತು.
ಜವಾಬಿತ್ತ ಸೂಪರ್ ನೋವಾಸ್ 7 ವಿಕೆಟಿಗೆ 102 ರನ್ ಗಳಿಸಿ ಶರಣಾಯಿತು.
ಸೂಪರ್ ನೋವಾಸ್ ಪರ ಕೌರ್ ಸರ್ವಾಧಿಕ 30 ರನ್ ಹೊಡೆದರು. ಸಿರಿವರ್ಧನೆ 19 ರನ್ ಮಾಡಿದರೆ, ಕಳೆದೆರಡೂ ಪಂದ್ಯಗಳಲ್ಲಿ ಮಿಂಚಿದ್ದ ಚಾಮರಿ ಅತಪಟ್ಟು ಕೇವಲ 6 ರನ್ ಮಾಡಿ ನಿರ್ಗಮಿಸಿದರು.
ಬಾಂಗ್ಲಾ ಸ್ಪಿನ್ನರ್ ಸಲ್ಮಾ ಖಾತುನ್ 3, ದೀಪ್ತಿ ಶರ್ಮ 2 ವಿಕೆಟ್ ಕಿತ್ತು ಸೂಪರ್ ನೋವಾಸ್ ಗೆ ಕಡಿವಾಣ ಹಾಕಿದರು.
ಮಂಧನಾ ಅರ್ಧ ಶತಕ
ಟ್ರೈಲ್ ಬ್ಲೇಜರ್ ಮೊತ್ತದಲ್ಲಿ ಮಂಧನಾ ಪಾಲೇ 68 ರನ್. ಎಡಗೈ ಸ್ಪಿನ್ನರ್ ರಾಧಾ ಯಾದವ್ 16 ರನ್ನಿಗೆ 5 ವಿಕೆಟ್ ಕಿತ್ತು ಮಂಧನಾ ಪಡೆಯ ದೊಡ್ಡ ಮೊತ್ತದ ಯೋಜನೆಯನ್ನು ವಿಫಲಗೊಳಿಸಿದರು.
ಮಂಧನಾ ಮತ್ತು ಡಿಯಾಂಟ್ರಾ ಡಾಟಿನ್ ಅವರಿಂದ ತಂಡಕ್ಕೆ ಉತ್ತಮ ಆರಂಭವೇನೋ ಲಭಿಸಿತು. ಆದರೆ ಮೊದಲ 3 ಓವರ್ ಗಳ ಜೋಶ್ ಅನಂತರ ಕಂಡುಬರಲಿಲ್ಲ.
3 ಓವರ್ ಗಳಲ್ಲಿ ಇವರಿಬ್ಬರು ಸೇರಿ 27 ರನ್ ಕಲೆ ಹಾಕಿದ್ದರು. ಅನಂತರ ಸೂಪರ್ ನೋವಾಸ್ ಬೌಲಿಂಗ್ ಬಿಗಿಯಾಗುತ್ತ ಹೋಯಿತು.
ಪೂನಂ ಯಾದವ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು.
20 ರನ್ನಿಗೆ 32 ಎಸೆತ (1 ಬೌಂಡರಿ) ತೆಗೆದುಕೊಂಡ ಡಾಟಿನ್ ಪೆವಿಲಿಯನ್ ಸೇರಿಕೊಂಡರು.
ಮೊದಲ ವಿಕೆಟಿಗೆ 71 ರನ್ ಒಟ್ಟುಗೂಡಿತು. ಇದೇ ಓವರಿನಲ್ಲಿ ಮಂಧನಾ ಅವರ ಅರ್ಧ ಶತಕ ಪೂರ್ತಿಗೊಂಡಿತು.
15ನೇ ಓವರಿನಲ್ಲಿ ಮಂಧನಾ ಸಿರಿವರ್ಧನೆ ಎಸೆತಕ್ಕೆ ಮುನ್ನುಗ್ಗಿ ಬಾರಿಸಲು ಹೋಗಿ ಸ್ಟಂಪ್ಡ್ ಆದರು.
ಮಂಧನಾ ಕೊಡುಗೆ 49 ಎಸೆತಗಳಿಂದ 68 ರನ್. ಈ ಪ್ರಚಂಡ ಬ್ಯಾಟಿಂಗ್ ವೇಳೆ ಅವರು 6 ಫೋರ್, 3 ಸಿಕ್ಸರ್ ಬಾರಿಸಿದರು.
PublicNext
10/11/2020 12:06 pm