ಚೆನ್ನೈ : ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಕ್ರಿಕೆಟ್ ಗೆ ಪ್ರಪಂಚಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ, ಮುಂದಿನ ಐಪಿಎಲ್ ಗೆ ಅಲಭ್ಯರಾಗಿದ್ದಾರೆ.
ಈಗಾಗಲೆ ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದ 39 ವರ್ಷದ ವ್ಯಾಟ್ಸನ್, ಟಿ20 ಲೀಗ್ ಗಳಲ್ಲಿ ಮಾತ್ರ ಆಡುತ್ತಿದ್ದರು.
2018ರಲ್ಲಿ ಮಿಂಚಿನ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ನಂಬರ್ ಒನ್ ಪಟ್ಟ ತಂದು ಕೊಟ್ಟ ಶೇನ್ ವ್ಯಾಟ್ಸನ್ ನಿವೃತ್ತಿ ಘೋಷಿಸಿದ್ದಾರೆ
2019ರ ಐಪಿಎಲ್ ನಲ್ಲೂ ಅವರು ಸಿಎಸ್ ಕೆ ಪರ ಫೈನಲ್ ಪಂದ್ಯದಲ್ಲಿ ದಿಟ್ಟ ಹೋರಾಟ ತೋರಿದ್ದರು.
ಆದರೆ ಈ ವರ್ಷ ಸಿಎಸ್ ಕೆ ಪರ ಉತ್ತಮ ನಿರ್ವಹಣೆ ತೋರಲು ವಿಫಲರಾಗಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಜೇಯ 83 ರನ್ ಗಳಿಸಿದ್ದು ಅವರ ಗರಿಷ್ಠ ಗಳಿಕೆಯಾಗಿತ್ತು.
ಸಿಎಸ್ ಕೆ ತಂಡ ಭಾನುವಾರ ಐಪಿಎಲ್-13ರ ಕೊನೇ ಪಂದ್ಯ ಆಡಿದ ಬಳಿಕ ವ್ಯಾಟ್ಸನ್ ಡ್ರೆಸ್ಸಿಂಗ್ ರೂಂನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು ಮತ್ತು ತಮ್ಮ ಜೀವನದ ಕೊನೇ ಪಂದ್ಯವನ್ನು ಆಡಿ ಆಗಿದೆ ಎಂದರು.
ಸಿಎಸ್ ಕೆ ತಂಡದ ಪರ ಆಡಿದ್ದು ತಮ್ಮ ಜೀವನದ ಭಾಗ್ಯ ಎಂದೂ ವ್ಯಾಟ್ಸನ್ ಭಾವುಕರಾಗಿ ನುಡಿದರು ಎಂದು ಸಿಎಸ್ ಕೆ ಮೂಲಗಳು ತಿಳಿಸಿವೆ.
ಇನ್ನು 2021ರ ಐಪಿಎಲ್ ನಲ್ಲಿ ಅವರು ಸಿಎಸ್ ಕೆ ತಂಡದ ತರಬೇತಿ ಸಿಬ್ಬಂದಿ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.
PublicNext
03/11/2020 01:55 pm