ನವದೆಹಲಿ : ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆಗೊಂಡ ಜಿಎಸ್ ಎಲ್ ವಿ- ಎಫ್ 10 ರಾಕೆಟ್ ತಾಂತ್ರಿಕ ಕಾರಣದಿಂದ ಉಪಗ್ರಹವನ್ನು ನಿಗದಿತ ಜಾಗಕ್ಕೆ ಸೇರಿಸಲು ವಿಫಲವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಭೂಮಿ ಪರಿವೀಕ್ಷಣಾ ಉಪಗ್ರಹ ಉಡಾವಣೆಗೆ ಹಿನ್ನಡೆಯಾಗಿದೆ. ರಾಕೆಟ್ ನ ಕ್ರಯೋಜೆನಿಕ್ ಹಂತದಲ್ಲಿ ಕಾರ್ಯಕ್ಷಮತೆಯ ವೈಪರೀತ್ಯದಿಂದಾಗಿ ಈ ಕಾರ್ಯಾಚರಣೆಯನ್ನು ಪೂರ್ಣವಾಗಿ ಸಾಧಿಸಲಾಗಲಿಲ್ಲ ಎಂದು ಇಸ್ರೋ ಗುರುವಾರ ತಿಳಿಸಿದೆ.
51.70 ಮೀಟರ್ ಎತ್ತರದ ರಾಕೆಟ್ ಜಿಎಸ್ಎಲ್ವಿ-ಎಫ್ 10/ಇಒಎಸ್ -03 ಅನ್ನು, 26 ಗಂಟೆಯ ಕೌಂಟ್ ಡೌನ್ ಮುಗಿದ ನಂತರ ಬೆಳಿಗ್ಗೆ 05.43ಕ್ಕೆ ಯೋಜಿಸಿದಂತೆ ಸತೀಶ್ ಧವನ್ ಉಡಾವಣೆ ಕೇಂದ್ರದ ಎರಡನೇ ಲಾಂಚ್ ಪ್ಯಾಡ್ ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್ ನ ಕಾರ್ಯಕ್ಷಮತೆ ಸಾಮಾನ್ಯವಾಗಿದೆ ಎಂದು ಮಿಷನ್ ನಿಯಂತ್ರಣ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದರು.
ಆದರೆ, ಕೆಲವು ನಿಮಿಷಗಳ ನಂತರ ವಿಜ್ಞಾನಿಗಳ ನಡುವೆ ಭಾರೀ ಚರ್ಚೆ ಆರಂಭವಾಯಿತು. ಅಂತಿಮವಾಗಿ, ‘ರಾಕೆಟ್ ನ ಕಾರ್ಯಕ್ಷಮತೆಯ ವೈಪರೀತ್ಯದಿಂದಾಗಿ ಮಿಷನ್ ಅನ್ನು ಸಂಪೂರ್ಣವಾಗಿ ಸಾಧಿಸಲಾಗಲಿಲ್ಲ. ಕ್ರಯೋಜೆನಿಕ್ ಹಂತದಲ್ಲಿ ಕಾರ್ಯಕ್ಷಮತೆಯ ಅಸಮರ್ಪಕತೆಯನ್ನು ಗಮನಿಸಲಾಗಿದೆ’ ಎಂದು ಕಾರ್ಯಾಚರಣೆಯ ನಿರ್ದೇಶಕರು ಘೋಷಿಸಿದರು.
ಭೂಮಿಯ ಪ್ರಮುಖ ಪ್ರದೇಶಗಳ ನೈಜ-ಸಮಯದ ಚಿತ್ರಣವನ್ನು ರವಾನಿಸುವುದು, ಕೃಷಿ, ಅರಣ್ಯ, ಜಲಮೂಲಗಳು ಹಾಗೂ ವಿಪತ್ತು ಎಚ್ಚರಿಕೆ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಅವಲೋಕನಕ್ಕೆ ನೆರವಾಗುವುದು ಈ ಉಪಗ್ರಹ ಉಡಾವಣೆಯ ಉದ್ದೇಶವಾಗಿತ್ತು.
PublicNext
12/08/2021 10:14 am