ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ. ಈ ಯುದ್ಧದ ಕರಿ ನೆರಳು ಬಾಹ್ಯಾಕಾಶ ಕ್ಷೇತ್ರದ ಮೇಲೂ ಪ್ರಭಾವ ಬೀರಿದೆ. ಶುಕ್ರವಾರ ರಷ್ಯಾ ಉಡಾವಣೆ ಮಾಡಲು ನಿರ್ಧರಿಸಿದ್ದ ಒನ್ವೆಬ್ ರಾಕೆಟ್ ಮೇಲಿರುವ ಯುಎಸ್ಎ, ಜಪಾನ್ ಮತ್ತು ಯುಕೆಗಳ ಧ್ವಜಗಳನ್ನು ತೆಗೆಯಲಾಗಿದ್ದು, ಅಲ್ಲಿ ರಷ್ಯಾ ಧ್ವಜದೊಂದಿಗೆ ಭಾರತದ ಧ್ವಜವನ್ನು ಮಾತ್ರ ಉಳಿಸಲಾಗಿದೆ.
ಈ ವಿಡಿಯೋವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮೋಸ್ ಮುಖ್ಯಸ್ಥ ಡಿಮಿಟ್ರಿ ರೋಗೋಜಿನ್ ಟ್ವೀಟ್ ಮಾಡಿದ್ದು, "ಕೆಲವು ದೇಶಗಳ ಧ್ವಜಗಳು ಇಲ್ಲದೆ ಹೋದರೆ ನಮ್ಮ ಸೊಯುಜ್ ರಾಕೆಟ್ ತುಂಬ ಸುಂದರವಾಗಿ ಕಾಣುತ್ತದೆ. ಹಾಗಾಗಿಯೇ ಇಲ್ಲಿನ ಲಾಂಚರ್ಗಳು ಅದನ್ನು ತೆಗೆದಿದ್ದಾರೆ" ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ರಷ್ಯಾದ ಬಾಹ್ಯಾಕಾಶ ನಿಲ್ದಾಣ (ರಾಕೆಟ್, ಉಪಗ್ರಹಗಳ ಉಡಾವಣಾ ನೆಲೆ)ಯಾದ ಬೈಕೊನೂರ್ನಲ್ಲಿ ಅಲ್ಲಿನ ಸಿಬ್ಬಂದಿ ಒನ್ ವೆಬ್ ರಾಕೆಟ್ ಮೇಲಿನ ಉಳಿದ ದೇಶಗಳ ಬಾವುಟಗಳನ್ನು ತೆಗೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಸೊಯುಜ್ ರಾಕೆಟ್ ನಾಳೆ ವಿವಿಧ ದೇಶಗಳ ಒಟ್ಟು 36 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.
PublicNext
03/03/2022 04:03 pm