ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಲ್ ಇಂಡಿಯಾ ಇಮಾಮ್ ಸಂಘಟನೆಗಳ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಗುರುವಾರ ಭೇಟಿಯಾಗಿದ್ದಾರೆ. ಈ ವೇಳೆ ವಿಶೇಷ ಮಾತುಕತೆ ನಡೆಸಿದ್ದಾರೆ.
ಭೇಟಿಯ ಬಳಿಕ ಮಾತನಾಡಿರುವ ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು 'ರಾಷ್ಟ್ರಪಿತ' ಎಂದು ಬಣ್ಣಿಸಿದ್ದಾರೆ.
"ಮೋಹನ್ ಭಾಗವತ್ ಅವರು ಇಂದು ನನ್ನ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ಅವರು 'ರಾಷ್ಟ್ರಪಿತ' ಮತ್ತು 'ರಾಷ್ಟ್ರಋಷಿ'. ಅವರ ಭೇಟಿಯಿಂದ ಉತ್ತಮ ಸಂದೇಶ ಹೊರಡಲಿದೆ. ದೇವರನ್ನು ಆರಾಧಿಸುವ ನಮ್ಮ ವಿಧಾನಗಳು ವಿಭಿನ್ನವಾಗಿವೆ. ಆದರೆ ದೊಡ್ಡ ಧರ್ಮವೆಂದರೆ ಮಾನವೀಯತೆ. ದೇಶ ಮೊದಲು ಬರುತ್ತದೆ ಎಂದು ನಾವು ನಂಬುತ್ತೇವೆ" ಎಂದು ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಭೇಟಿಯ ವಿಚಾರವಾಗಿ ಮಾತನಾಡಿರುವ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನಿಲ್ ಅಂಬೇಕರ್, "ಇಲ್ಯಾಸಿ ಸಾಹಬ್ ಅವರು ಮೋಹನ್ ಭಗವತ್ ಅವರನ್ನು ಹಲವು ದಿನಗಳ ಹಿಂದೆ ಆಹ್ವಾನಿಸಿದ್ದರು. ಆದ್ದರಿಂದ ಅವರು ಇಲ್ಲಿ ಅವರನ್ನು ಭೇಟಿಯಾದರು. ಆರ್‌ಎಸ್‌ಎಸ್ ಸರ ಸಂಘ ಚಾಲಕ್ ಎಲ್ಲಾ ವರ್ಗದ ಜನರನ್ನು ಭೇಟಿಯಾಗುತ್ತಾರೆ. ಇದು ನಿರಂತರ ಸಾಮಾನ್ಯ ಸಂವಾದದ ಪ್ರಕ್ರಿಯೆಯ ಭಾಗವಾಗಿದೆ” ಎಂದು ಹೇಳಿದ್ದಾರೆ.
PublicNext
22/09/2022 07:27 pm