ಯಾದಗಿರಿ : ತಟ್ಟೆಯು ಇಲ್ಲ.. ಪತ್ರೊಳಿನೂ ಇಲ್ಲದೆ ಜೋಳದ ರೊಟ್ಟಿ, ಪುಂಡಿಪಲ್ಯೆ, ಬದನೆಕಾಯಿ ಪಲ್ಯೆ, ಕರ್ಚಿ ಕಾಯಿ, ಚಕ್ಕುಲಿ ಹೀಗೆ ಬಗೆ ಬಗೆಯ ತಿಂಡಿ ಪದಾರ್ಥಗಳನ್ನು ಬಂಡೆ ಮೇಲೆ ಹಾಕಿಕೊಂಡು ಸಾಮೂಹಿಕವಾಗಿ ಊಟ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಯಾದಗಿರಿ ತಾಲೂಕಿನ ಕಾಳೆಬೆಳಗುಂದಿ ಗ್ರಾಮದ ಹೊರವಲಯದ ಶ್ರೀ ಬಂಡೇ ರಾಚೋಟೇಶ್ವರ ದೇವಸ್ಥಾನದಲ್ಲಿ.
ಹೌದು.. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಕೊನೆಯವಾರದಂದು ಬಂಡೆ ರಾಚೋಟೇಶ್ವರ ಅದ್ಧೂರಿ ಜಾತ್ರೆ ನಡೆಯುತ್ತೆ. ಕಾಳಬೆಳಗುಂದಿ ಗ್ರಾಮ ಸೇರಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಕುಟುಂಬ ಸಮೇತ ತಿಂಡಿ ಪದಾರ್ಥಗಳ ಬುತ್ತಿ ಕಟ್ಟಿಕೊಂಡು ಬಂದು ಸಾಮೂಹಿಕವಾಗಿ ಬಂಡೆಯ ಮೇಲೆ ಊಟ ಮಾಡೋದು ವಿಶೇಷ.
ಇನ್ನು ಈ ಜಾತ್ರೆಗೆ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಕುಟುಂಬ ಸಮೇತರಾಗಿ ಸಾವಿರಾರು ಜನರು ಬಂದು ಕಲ್ಲು ಬಂಡೆಯ ಮೇಲೆ ಊಟ ಮಾಡಿ ಹರಕೆ ತೀರಿಸುತ್ತಾರೆ. ಬಂಡೇಯ ಮೇಲೆ ಊಟ ಮಾಡೋದ್ರಿಂದ ಕಾಯಿಲೆ ಬರುವುದಿಲ್ಲ, ಒಳ್ಳೆಯ ಆರೋಗ್ಯ ಜೊತೆಗೆ ಮಕ್ಕಳಾಗದವರು ಈ ದೇವರಲ್ಲಿ ಬೇಡಿಕೊಂಡರೆ ಸಂತಾನ ವೃದ್ಧಿಯಾಗುತ್ತೆ ಎಂದು ದೇವರ ದರ್ಶನ ಪಡೆಯುತ್ತಾರೆ.
ಸುಮಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಬಂಡೆ ರಾಚೋಟೇಶ್ವರ ವಿಶಿಷ್ಟ ಜಾತ್ರೆಯಲ್ಲಿ ಬಡವ ಶ್ರೀಮಂತರೆಂಬ ಬೇಧ ಭಾವವಿಲ್ಲದೇ ಎಲ್ಲರೂ ಒಟ್ಟಿಗೆ ಪಾಲ್ಗೊಂಡು ವಿವಿಧ ಖ್ಯಾದ್ಯಗಳನ್ನು ಬಂಡೆ ಮೇಲೆ ಹಾಕಿ ಸವಿದರೆ ಚರ್ಮ ರೋಗ ವಾಸಿಯಾಗುವುದರ ಜೊತೆಗೆ ಒಳ್ಳೆಯದಾಗುತ್ತೆ ಅನ್ನೋದು ಭಕ್ತರ ನಂಬಿಕೆ.
ಆಧುನಿಕತೆ ಎಷ್ಟೇ ಮುಂದುವರೆದರೂ ಇಲ್ಲಿಗೆ ಬರುವ ಭಕ್ತರು ಯಾವುದೇ ಭೇಧ ಭಾವವಿಲ್ಲದೇ ಬಂಡೆಯ ಮೇಲೆ ಊಟ ಮಾಡುವುದು ನಿಜಕ್ಕೂ ವಿಚಿತ್ರವಾದರೂ ಸತ್ಯ. ಬಂಡೆಯ ಮೇಲೆ ಊಟ ಮಾಡಿದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತೆ ಎನ್ನೊದು ಭಕ್ತರ ನಂಬಿಕೆಯಾಗಿದೆ.
ವರದಿ: ಮೌನೇಶ ಬಿ. ಮಂಗಿ ಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ.
PublicNext
23/08/2022 10:47 pm