ರಾಯಚೂರು: 2023ರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆಯಿಂದ ಬೆಂಗಳೂರು ವರೆಗೆ ಸಾಮಾಜಿಕ ಕಾರ್ಯಕರ್ತ ನಾಗರಾಜ ಕಲಕುಟುಕರ ಆರಂಭಿಸಿರುವ ಸ್ವಚ್ಛ ವಿಧಾನಸಭೆ ಅಭಿಯಾನ ಇಂದು ರಾಯಚೂರು ಜಿಲ್ಲೆಗೆ ಆಗಮಿಸಿದ ವೇಳೆ ವಿವಿಧ ಸಂಘಟನೆ ಮುಖಂಡರು ಸ್ವಾಗತಿಸಿದರು.
ಬಾಗಲಕೋಟೆಯಿಂದ ಜೂನ್ 9 ರಂದು ಆರಂಭಿಸಿರುವ ಈ ಅಭಿಯಾನ ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿ ಇದೀಗ ರಾಯಚೂರು ಜಿಲ್ಲೆಗೆ ಆಗಮಿಸಿದೆ. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಸಂಚರಿಸಿ, ಮುಂದಿನ ಜನವರಿ 26 ರಂದು ಬೆಂಗಳೂರು ತಲುಪಲಿದೆ. ನಂತರ ಮಾತನಾಡಿದ ನಾಗರಾಜ ಕಲಕುಟುಕರ ಅವರು, ಪಾದಯಾತ್ರೆ ಮೂಲಕ ರಾಜ್ಯದ ಲಕ್ಷಾಂತರ ಮತದಾರರನ್ನು ಭೇಟಿಯಾಗಿ ತಮ್ಮ ಅಮೂಲ್ಯ ಮತಗಳನ್ನು ದಕ್ಷರು, ಕಳಂಕ ರಹಿತರು, ಭ್ರಷ್ಟಾಚಾರ ರಹಿತರು, ಜಾತ್ಯತೀತ, ಪ್ರಬುದ್ಧರಿಗೆ, ಜನಪರ ಚಿಂತನೆ ಉಳ್ಳವರಿಗೆ ಹಾಗೂ ಪ್ರಾಮಾಣಿಕ ನಾಯಕರಿಗೆ ಮತ ಹಾಕುವ ಮೂಲಕ ಶಾಸಕರನ್ನಾಗಿ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದ ಅವರು ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧವನ್ನು ಭ್ರಷ್ಟರು, ಮತಾಂದರು ಮತ್ತು ಲೂಟಿಕೋರರಿಂದ ಮುಕ್ತಗೊಳಿಸಬೇಕು. ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.
PublicNext
21/09/2022 06:54 pm