ರಾಯಚೂರು: ಸದನದಲ್ಲಿ ಎಂಎಸ್‌ಪಿ ಹಿಂಪಡೆಯುವುದಿಲ್ಲ ಎಂದು ಕಡಾಖಂಡಿತವಾಗಿ ಸರ್ಕಾರ ಹೇಳಿದೆ. ಆದರೆ ವಾಸ್ತವವಾಗಿ ರೈತರಿಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಯಚೂರು ಜಿಲ್ಲೆಯ ರೈತರ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಸೂರ್ಯಕಾಂತಿ, ಭಕ್ತ, ಜೋಳ, ಸಜ್ಜೆ, ತೊಗರಿ, ಮೆಣಸಿನ ಕಾಯಿ, ಹೆಸರು, ಹತ್ತಿಯಂತ ಬೆಳೆ ಅಧಿಕವಾಗಿ ಬೆಳೆಯಲಾಗುತ್ತದೆ. ಈಗಾಗಲೇ ಸೂರ್ಯಕಾಂತಿ ಬೆಳೆ ಕಟಾವಿಗೆ ಬಂದು ರೈತರು ಎಪಿಎಂಸಿಗಳಿಗೆ ಸೂರ್ಯಕಾಂತಿ ಬೀಜಗಳನ್ನು ತಂದು ಮಾರಾಟಕ್ಕಾಗಿ ವಾರಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಬೆಲೆ ಕುಸಿತ, ಮತ್ತೊಂದೆಡೆ ಖರೀದಿ ಮಾಡುವವರ ಕೊರತೆ ಕಾಡುತ್ತಿದೆ. ಪ್ರತಿ ಎಕರೆ ಸೂರ್ಯಕಾಂತಿ ಬೆಳೆ ಬೆಳೆಯಲು 12 ರಿಂದ 15 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಕ್ವಿಂಟಾಲ್ ಬೆಲೆ 4 ಸಾವಿರದಿಂದ 5 ಸಾವಿರ ಮಾತ್ರ ಇದೆ. ಇದರಿಂದ ರೈತರು ಭಾರೀ ನಷ್ಟಕ್ಕೆ ಗುರಿಯಾಗುವಂತಾಗಿದೆ.
ಲಿಂಗಸೂಗೂರು, ಮುದುಗಲ್, ಮಸ್ಕಿ ಭಾಗದಲ್ಲಿ ಸೂರ್ಯಕಾಂತಿ ಖರೀದಿಗೆ ಆಸಕ್ತಿ ತೋರದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಳ್ಳುವಂತೆ ಮಾಡಿದೆ. ರಾಜ್ಯ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ, ಸೂರ್ಯಕಾಂತಿ ಬೆಳೆಗಾರರನ್ನು ರಕ್ಷಿಸಬೇಕೆಂದು ರೈತರ ಒತ್ತಾಯಿಸುತ್ತಿದ್ದಾರೆ.
PublicNext
23/09/2022 01:12 pm