ರಾಯಚೂರು: ನಗರದ ನವೋದಯ ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ ಗಲಾಟೆ ಸದ್ದು ಮಾಡಿದ್ದು, ತಾಯಿಯ ವಿಚಾರದಲ್ಲಿ ರ‌್ಯಾಗಿಂಗ್ ಮಾಡಿದ್ದಕ್ಕೆ ರೋಸಿ ತರಗತಿಯಲ್ಲೇ ಪ್ರಾಧ್ಯಾಪಕರ ಎದುರೇ ವಿದ್ಯಾರ್ಥಿಗಳು ಬಡಿದಾಡಿಕೊಂಡ ಘಟನೆ ನಡೆದಿದೆ.
ಘಟನೆಯಲ್ಲಿ ಓರ್ವನ ತಲೆಗೆ ಗಂಭೀರ ಗಾಯವಾಗಿದ್ದು, 12 ಹೊಲಿಗೆ ಹಾಕಲಾಗಿದೆ. ಮತ್ತೋರ್ವನ ಹಣೆಗೆ ಪೆಟ್ಟಾಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಶಂಕರ್ ಮತ್ತು ಶಂಭುಲಿಂಗ ಎಂದು ಗುರುತಿಸಲಾಗಿದೆ. ರಾಹುಲ್ ಹೆಸರಿನ ವಿದ್ಯಾರ್ಥಿ, ಇಬ್ಬರ ಮೇಲೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಗಲಾಟೆ ಮಾಡಿದವರೆಲ್ಲ ಬಿಎಸ್ಸಿ ನರ್ಸಿಂಗ್ ಸ್ಟೂಡೆಂಟ್ಸ್. ರಾಹುಲ್ ತನ್ನ ತಾಯಿ ಬರ್ತಡೇಗೆ ಸ್ಟೇಟಸ್ ಹಾಕಿದ್ದ ಫೋಟೋವನ್ನು ಶಂಕರ್ ಮತ್ತು ಶಂಭುಲಿಂಗ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ ರಾಹುಲ್‌ನನ್ನು ಶಂಭುಲಿಂಗ ಮತ್ತು ಶಂಕರ್ ಗ್ಯಾಂಗ್ ಸುಖಾ ಸುಮ್ಮನೆ ರೇಗಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ತಾಯಿಯ ಬಗ್ಗೆಯೂ ಮಾತನಾಡಲಾಗಿದೆ.
ನಿರಂತರ ರ್ಯಾಗಿಂಗ್ನಿಂದ ರೋಸಿ ಹೋಗಿದ್ದ ರಾಹುಲ್, ಕಾಲೇಜಿನ ಟೆರಸ್ ಮೇಲಿದ್ದ ರಾಡ್ ತೆಗೆದುಕೊಂಡು ಬಂದು ಇಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ. ಕಣ್ಣೆದುರೇ ನಡೆದ ಭೀಕರ ಮಾರಾಮಾರಿ ಕಂಡು ಪ್ರಾಧ್ಯಾಪಕರೇ ಶಾಕ್ ಆಗಿದ್ದಾರೆ. ಸ್ವಲ್ಪ ಯಾಮಾರಿದ್ರೂ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಹೆಣ ಬೀಳುತ್ತಿದ್ದವು. ಇನ್ನು ತರಗತಿ ಹಾಗೂ ಕಾಲೇಜು ಕಾರಿಡಾರ್ನಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವ ಕಾರಣ ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಲೇಜು ಪ್ರಿನ್ಸಿಪಾಲ್ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ನೇತಾಜಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
21/09/2022 03:25 pm