ರಾಯಚೂರು : ದೇಶದ ಬೆನ್ನೆಲುಬು ರೈತ ಅಂತ ಕರೀತಾರೆ, ಆದರೆ ರೈತರ ಏಳಿಗೆಗಾಗಿ ಎಂ.ಎಸ್.ಪಿ ಜಾರಿಗೆ ಮಾಡಿ ಅವರ ಆದಾಯ ದ್ವಿಗುಣ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ಇತ್ತ ಒಮ್ಮೆ ನೋಡಬೇಕಿದೆ. ರೈತರು ಬೆಳೆದ ಬೆಳೆಗೆ ಸರಿಯಾಗಿ ಬೆಂಬಲ ಬೆಲೆ ಸಿಗುತ್ತಿಲ್ಲ ಇದರಿಂದ ರೈತ ಆರ್ಥಿಕ ನಷ್ಟದ ಸಂಕಷ್ಟಕ್ಕೆ ಸಿಲುಕಿದ್ದು ಸಾಲದ ಹೊರೆ ಹೆಚ್ಚಾಗುತ್ತಿದೆ.
ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆಗಾರರ ಸಂಕಷ್ಟ ರೈತ ಕುಟುಂಬಗಳ ಜೀವನವೇ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಜಿಲ್ಲೆಯಲ್ಲಿ ಹತ್ತಿಯೊಂದಿಗೆ ಎಣ್ಣೆ ಬೀಜ ಸೂರ್ಯಕಾಂತಿ ಬೆಳೆ ಅಧಿಕವಾಗಿ ಬೆಳೆಯಲಾಗುತ್ತದೆ. ಕಳೆದ ವರ್ಷ ಉತ್ತಮ ಬೆಲೆಯಿಂದಾಗಿ ಈ ವರ್ಷ ಹೆಚ್ಚಿನ ರೈತರು ಹತ್ತಿ ಮತ್ತು ಸೂರ್ಯಕಾಂತಿ ಬೆಳೆಗೆ ಆದ್ಯತೆ ನೀಡಿದ್ದರು. ಈಗಾಗಲೇ ಸೂರ್ಯಕಾಂತಿ ಬೆಳೆ ಕಟಾವಿಗೆ ಬಂದು ರೈತರು ಎಪಿಎಂಸಿಗಳಿಗೆ ಸೂರ್ಯಕಾಂತಿ ಬೀಜಗಳನ್ನು ತಂದು ಮಾರಾಟಕ್ಕಾಗಿ ವಾರಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ಬೆಲೆ ಕುಸಿತ, ಮತ್ತೊಂದೆಡೆ ಖರೀದಿ ಮಾಡುವವರ ಕೊರತೆಯಿಂದ ಲಿಂಗಸೂಗೂರು ತಾಲೂಕಿನ ರೈತರ ಪಾಲಿಗೆ ಸೂರ್ಯಕಾಂತಿ ಬೆಳೆ ಆದಾಯಕ್ಕೆ ಕಾಂತಿ ಇಲ್ಲದಂತೆ ಮಾಡಿದೆ. ಪ್ರತಿ ಎಕರೆ ಸೂರ್ಯಕಾಂತಿ ಬೆಳೆ ಬೆಳೆಯಲು 12 ರಿಂದ 15 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಕ್ವಿಂಟಾಲ್ ಬೆಲೆ ೪ ಸಾವಿರದಿಂದ 5 ಸಾವಿರ ಮಾತ್ರ ಇದೆ. ಇದರಿಂದ ರೈತರು ಭಾರೀ ನಷ್ಟಕ್ಕೆ ಗುರಿಯಾಗುವಂತಾಗಿದೆ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಈಗಾಗಲೇ ಬೆಳೆ ನಷ್ಟ ಸಮಸ್ಯೆ ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಬೆಲೆ ಕುಸಿತ ರೈತರನ್ನು ಭಾರೀ ನಷ್ಟಕ್ಕೆ ತಳ್ಳಿದೆ.
Kshetra Samachara
21/09/2022 04:19 pm