ಜೈಪುರ (ರಾಜಸ್ಥಾನ): ವಿಧಾನಸಭೆ ಚುನಾವಣೆಗೆ ಕೇವಲ 14 ತಿಂಗಳು ಬಾಕಿಯಿರುವ ನಡುವೆಯೇ ಕಾಂಗ್ರೆಸ್ ಅಧಿಕಾರದಲ್ಲಿರುವ ದೇಶದ ಎರಡನೇ ಅತಿ ದೊಡ್ಡ ರಾಜ್ಯ ಎನಿಸಿರುವ ರಾಜಸ್ಥಾನದ ರಾಜಕೀಯಲ್ಲಿ ತಲ್ಲಣ ಸೃಷ್ಟಿಯಾಗುತ್ತಲೇ ಇದೆ.
ಎಐಸಿಸಿ ಅಧ್ಯಕ್ಷ ಸ್ಥಾನದ ಪೈಪೋಟಿಗೆ ಸಂಬಂಧಿಸಿದಂತೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ದಿನೇದಿನೇ ಉಲ್ಬಣಿಸುತ್ತಿರುವ ನಡುವೆಯೇ, ಪ್ರತಿಪಕ್ಷಗಳು ಇದರ ಲಾಭ ಪಡೆಯಲು ಹವಣಿಸುತ್ತಿವೆ. ಆದ್ದರಿಂದ ಇದು ಕಾಂಗ್ರೆಸ್ಸಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಒಬ್ಬರು ಒಂದೇ ಹುದ್ದೆ ಅಲಂಕರಿಸಬೇಕು ಎಂದು ಕಾಂಗ್ರೆಸ್ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷರಾದರೆ ಸಿಎಂ ಸ್ಥಾನವನ್ನು ಬಿಟ್ಟುಕೊಡಲೇಬೇಕು. ಅವರ ಉತ್ತರಾಧಿಕಾರಿಯಾಗಿ ಸಚಿನ್ ಪೈಲಟ್ ಸಿಎಂ ಖುರ್ಚಿ ಏರಲು ತಯಾರಿ ನಡೆಸಿದ್ದಾರೆ.
ಆದರೆ ಅವರನ್ನು ಸುತರಾಂ ಸಿಎಂ ಆಗಲು ಬಿಡುವುದಿಲ್ಲ ಎಂದು ಇದಾಗಲೇ ಗೆಹ್ಲೋಟ್ ಬೆಂಬಲಿಗರಾಗಿರುವ 90 ಮಂದಿ ರಾಜೀನಾಮೆಯನ್ನೂ ನೀಡಿಬಿಟ್ಟಿದ್ದಾರೆ. ಇದರಿಂದಾಗಿ ಕಾಂಗ್ರೆಸ್ಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಇದೇ ಕಾರಣದಿಂದ ‘ಭಾರತ್ ಜೋಡೋ ಯಾತ್ರೆ’ಯ ಬದಲು ಸದ್ಯ ರಾಜಸ್ಥಾನದಲ್ಲಿ ‘ಕಾಂಗ್ರೆಸ್ ಜೋಡೋ’ ಯಾತ್ರೆ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದೇ ಕಾರಣಕ್ಕೆ ಕಾಂಗ್ರೆಸ್ನ ಹಲವು ನಾಯಕರು ಈ ಸಮಸ್ಯೆಯಿಂದ ಹೇಗಾದರೂ ಪಾರು ಮಾಡಿ, ಕಾಂಗ್ರೆಸ್ ಇಬ್ಭಾಗವಾಗದಂತೆ ನೋಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಎಐಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಗೆಹ್ಲೋಟ್ ಬಿಟ್ಟರೆ ಸಂಸದ ಶಶಿ ತರೂರ್ ಇದ್ದಾರೆ. ಇವರು ಚುನಾವಣೆಯಲ್ಲಿ ಸ್ಪರ್ಧಿಸಲು ಇದಾಗಲೇ ಸೋನಿಯಾ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ.
ಆದರೆ ಇವರನ್ನು ತಾವು ಅಧ್ಯಕ್ಷರನ್ನಾಗಿ ಸ್ವೀಕರಿಸಲು ಸಾಧ್ಯವೇ ಇಲ್ಲ ಎಂದು ಕೇರಳದ ಕಾಂಗ್ರೆಸ್ಸಿಗರು ಪಟ್ಟು ಹಿಡಿದು ಕುಳಿತಿದ್ದು, ರಾಹುಲ್ ಗಾಂಧಿಯೇ ನಮ್ಮ ಅಧ್ಯಕ್ಷರು ಎಂದಿದ್ದಾರೆ. ರಾಹುಲ್ ಅಧ್ಯಕ್ಷ ಸ್ಥಾನಕ್ಕೆ ಅಷ್ಟು ಉತ್ಸುಕರಾಗದ ಕಾರಣ ಗೆಹ್ಲೋಟ್ ಅಧ್ಯಕ್ಷರಾಗುವ ಸಾಧ್ಯತೆ ಇದೆ.
ಹೀಗಾಗಿ ಬಿಟ್ಟರೆ ರಾಜಸ್ಥಾನದ ಕಾಂಗ್ರೆಸ್ ಇಬ್ಭಾಗವಾಗುವ ಸಾಧ್ಯತೆ ಇರುವುದು ರಾಜಸ್ಥಾನದ ಸಿಎಂ ಖುರ್ಚಿಯ ವಿಷಯ ಬಿಡಿಸಲಾಗದ ಗಂಟಾಗಿ ಹೋಗಿದೆ. ಇದಾಗಲೇ ಕಾಂಗ್ರೆಸ್ ಪ್ರಾಬಲ್ಯದ ಕೆಲ ರಾಜ್ಯಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿರುವ ನಡುವೆಯೇ ರಾಜಸ್ಥಾನದಲ್ಲಿಯೂ ಕಾಂಗ್ರೆಸ್ ಹೀಗೆ ಚೆಲ್ಲಾಪಿಲ್ಲಿಯಾಗಿಬಿಟ್ಟರೆ ತಮ್ಮ ಗತಿಯೇನು ಎಂದು ಕಾರ್ಯಕರ್ತರು ಸೋನಿಯಾ ಬಳಿ ಅಳಲು ತೋಡಿಕೊಂಡಿದ್ದಾರೆ, ಕಾಂಗ್ರೆಸ್ ಜೋಡೋ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಈ ಬಿಕ್ಕಟ್ಟಿಗೆ ಕಾರಣ, ಅಶೋಕ್ ಗೆಹ್ಲೋಟ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಎನ್ನುವ ಕಾರಣಕ್ಕೆ ಹೈಕಮಾಂಡ್ ಅವರನ್ನು ಸ್ಪರ್ಧೆಯಿಂದ ಹೊರಕ್ಕೆ ಇರಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ಸನ್ನು ಉಳಿಸಿಕೊಳ್ಳಲು ಗೆಹ್ಲೋಟ್ ಅವರು ಸಿಎಂ ಹುದ್ದೆಯಿಂದ ಹೊರಕ್ಕೆ ಹೋಗಬಾರದು ಎಂದರೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರು ಸ್ಪರ್ಧಿಸಬಾರದು ಎನ್ನುವ ಏಕೈಕ ದಾರಿ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದಿರುವ ಹಿರಿಯ ನಾಯಕರು, ಗೆಹ್ಲೋಟ್ ಅವರನ್ನು ಸ್ಪರ್ಧೆಯಿಂದ ಹೊರಕ್ಕೆ ಉಳಿಯಲು ಹೇಳಿರುವುದಾಗಿ ತಿಳಿದುಬಂದಿದೆ. ಆದ್ದರಿಂದ ಗೆಹ್ಲೋಟ್ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಈಗಿರುವ ಪ್ರಶ್ನೆ.
ಒಂದು ವೇಳೆ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹೊರಕ್ಕೆ ಉಳಿದರೆ ಈ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸನಿಕ್, ಕೆ.ಸಿ.ವೇಣುಗೋಪಾಲ್ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
PublicNext
26/09/2022 08:56 pm