ಬೆಂಗಳೂರು: ಕಳೆದ ಒಂದು ವಾರದಿಂದ ಬಿಡದೇ ಸುರಿಯುತ್ತಿರುವ ರಣಭೀಕರ ಮಳೆಯು ಬೆಂಗಳೂರು ಜನರ ಜನ್ಮ ಜಾಲಾಡುತ್ತಿದೆ. ಎಲ್ಲೆಂದರಲ್ಲಿ ನೀರು ಹೊಕ್ಕು ಜನಜೀವನ ಅಸ್ತವ್ಯಸ್ತವಾಗಿದೆ. ಸುಮಾರು ಐದು ದಶಕಗಳ ನಂತರ ಬೆಂಗಳೂರು ಮಹಾನಗರಕ್ಕೆ ರಣಚಂಡಿ ಮಳೆ ಸುರಿದು ಬೀದಿಗಳೆಲ್ಲ ಕೆರೆಗಳಂತಾಗಿವೆ.
ಪರಿಸ್ಥಿತಿ ಹೀಗಿರಬೇಕಾದರೆ ಸಂಸದ ತೇಜಸ್ವಿ ಸೂರ್ಯ ಪದ್ಮನಾಭನಗರದ ಹೊಟೇಲ್ ಒಂದರಲ್ಲಿ ದೋಸೆ ರುಚಿ ಸವಿದು ಅದರ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದು ಮಳೆಯಿಂದ ತೊಂದರೆಗೊಳಗಾದ ಜನರನ್ನು ಕೆರಳುವಂತೆ ಮಾಡಿದೆ.
ವಿಡಿಯೋದಲ್ಲಿ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಪದ್ಮನಾಭನಗರದ ಸಾತ್ವಿ ಕಿಚನ್‌ಗೆ ಬಂದಿದ್ದೆ. ಇನ್‌ಸ್ಟಾಗ್ರಾಮ್‌ನಲ್ಲಿ ದೋಸೆಯ ಫೋಟೋ ನೋಡಿ ಟೆಂಪ್ಟ್ ಆಗಿ ಇಲ್ಲಿಗೆ ಬಂದಿದ್ದೇನೆ. ತುಂಬಾ ಚೆನ್ನಾಗಿದೆ ಬೆಣ್ಣೆ ಮಸಾಲೆ. ನೀವೂ ಬನ್ನಿ. ತಿಂದಾಗ್ಲೇನೆ ನಿಮಗೆ ಗೊತ್ತಾಗೋದು. ಇಲ್ಲಿನ ಉಪ್ಪಿಟ್ಟು ಕೂಡ ಚೆನ್ನಾಗಿದೆ. ಬನ್ನಿ' ಎಂದ ತೇಜಸ್ವಿ ಸೂರ್ಯ ಇತರರನ್ನು ಹೋಟೆಲ್‌ಗೆ ಬರುವಂತೆ ಆಹ್ವಾನಿಸಿದ್ದಾರೆ.
ನಿನ್ನೆ ಸೆಪ್ಟೆಂಬರ್ 5ರಂದು ತೆಗೆದ ವಿಡಿಯೋ ಇದಾಗಿದ್ದು ಸದ್ಯ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಬೆಂಗಳೂರಿನ ಜನ ಬೇಜವಬ್ದಾರಿ ಸಂಸದ ಎಂದು ಆಕ್ರೋಶಿತರಾಗಿದ್ದಾರೆ.
PublicNext
06/09/2022 02:57 pm