ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಬಿಜೆಪಿ ಹೈಕಮಾಂಡ್ ಬಿಎಸ್‌ವೈ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ನೀಡುವ ಮೂಲಕ ಹೈಕಮಾಂಡ್ ಅಚ್ಚರಿ ಮೂಡಿಸಿದೆ.
ಕೇಂದ್ರ ನಾಯಕರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್‌ರಂತ ನಾಯಕರನ್ನು ಸಮಿತಿಯಿಂದ ಹೊರಕ್ಕಿಟ್ಟು ಯಡಿಯೂರಪ್ಪ ಅವರಿಗೆ ಈ ಹುದ್ದೆಯನ್ನು ನೀಡಿದೆ. ಜತೆಗೆ ಮತ್ತೊಬ್ಬ ಕನ್ನಡಿಗರಾದ ಬಿಎಲ್ ಸಂತೋಷ್ ಅವರನ್ನೂ ಸಹ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ.ಈ ಸಂಬಂಧ ಎರಡೂ ಸಮಿತಿಗಳನ್ನು ಪುನಾರಚನೆ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ. ಇದೊಂದು ಅಚ್ಚರಿಯ ರಾಜಕೀಯ ಬೆಳವಣಿಗೆಯಾಗಿದ್ದು ಯಡಿಯೂರಪ್ಪ ಅವರನ್ನು ಸಕ್ರಿಯ ರಾಜಕಾರಣದಲ್ಲೇ ಮುಂದುವರೆಯುವಂತೆ ಮಾಡಲು ಬಿಜೆಪಿ ಮಾಡಿರುವ ಯೋಜನೆಯಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಜತೆಗೆ ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಬೆಂಬಲವಿಲ್ಲದೇ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂಬ ಅಂಶ ಬಿಜೆಪಿ ಹೈಕಮಾಂಡ್ ತಿಳಿದಿರುವ ವಿಚಾರವೇ. ಇದೇ ಕಾರಣಕ್ಕೆ ಓಲೈಕೆ ರಾಜಕಾರಣಕ್ಕೆ ಹೈಕಮಾಂಡ್ ಮಣೆ ಹಾಕಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
-ಪ್ರವೀಣ್ ರಾವ್
PublicNext
17/08/2022 04:16 pm