ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ:ಅಮೃತ ಮಹೋತ್ಸವದಲ್ಲಿ ಅವ್ಯವಸ್ಥೆ; ಪರದಾಡಿದ ಜನ.!

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಮೃತ ಮಹೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಜನರು ಆಗಮಿಸಿದ್ದರು. ಆದ್ರೆ, ಸರಿಯಾದ ವ್ಯವಸ್ಥೆ ಇರದ ಕಾರಣ ಇವರೆಲ್ಲ ಪರದಾಡಿದರು.

ಊಟ, ಉಪಹಾರ ವಿಚಾರದಲ್ಲಿ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಕೌಂಟರ್‌ಗಳನ್ನು ತೆರೆದಿದ್ದರೂ ಎಷ್ಟೋ ಮಂದಿಗೆ ಊಟವೇ ಸಿಗಲಿಲ್ಲ. ಇನ್ನು ಮಾಧ್ಯಮದವರಿಗೆ ವೈಫೈ ವ್ಯವಸ್ಥೆ ಕೊನೆವರೆಗೂ ಮಾಡಲಿಲ್ಲ.ಇದರಿಂದಾಗಿ ಪರದಾಟ ನಡೆಸಬೇಕಾಯಿತು.

ಬೆಳಿಗ್ಗೆಯಿಂದ ಮಳೆ ಸುರಿದ ಕಾರಣ ಖುರ್ಚಿಯಲ್ಲಿ ಜನರು ಬಂದು ಕುಳಿತಿದ್ದರು. ಮಳೆ ನೀರಿನಿಂದಾಗಿ ಕೆಸರಿನ ನಡುವೆಯೇ ಖುರ್ಚಿಗಳಲ್ಲಿ ಜನರು ಇದ್ದರು. ಹೊರಗಡೆ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿತ್ತು. ಮೈಕ್ ನಲ್ಲಿ ಆಗಾಗ್ಗೆ ಕಾರಿನಿಂದ ಬಂದವರು, ಟ್ರ್ಯಾಕ್ಸ್ ಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕ್ ಮಾಡದ ಕಾರಣ ವೇದಿಕೆಗೆ ಬರಲು ಕಾಂಗ್ರೆಸ್ ನ ಘಟಾನುಘಟಿ ನಾಯಕರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಾಜಿ ಸಿಎಂ ವೀರಪ್ಪ ಮೊಯ್ಲಿ, ರಾಹುಲ್ ಗಾಂಧಿ ಅವರಿಗೆ ಇದರ ಬಿಸಿ ತಟ್ಟಿತ್ತು ಎಂದರೆ ಎಷ್ಟು ಮಟ್ಟಿಗೆ ಅವ್ಯವಸ್ಥೆ ಇತ್ತು ಎಂಬುದು ಗೊತ್ತಾಗುತ್ತದೆ.

ಇನ್ನು ಲಕ್ಷಾಂತರ ಜನರಿಗಾಗಿ ಮೈಸೂರ್ ಪಾಕ್, ಪಲಾವ್, ಬಿಸಿಬೇಳೆ ಬಾತ್, ಮೊಸರನ್ನದ ವ್ಯವಸ್ಥೆ ಮಾಡಲಾಗಿತ್ತು. ಕೌಂಟರ್ ಗಳನ್ನು ತೆರೆದಿದ್ದರೂ ಜನರು ಸಾಲು ಸಾಲಾಗಿ ಬಂದು ನಿಂತು ಪಡೆಯಲು ಯಾವ ರೀತಿಯಲ್ಲೂ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದಾಗಿ ಜನರು ಆಹಾರ ಸೇವಿಸಲು ಮುಗಿ ಬಿದ್ದರು. ಇದರಿಂದಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೆಲವರಿಗಂತೂ ಕುಳಿತುಕೊಳ್ಳಲು ಜಾಗ ಇರಲಿಲ್ಲ.ಊಟವೂ ಅಷ್ಟೇನೂ ಚೆನ್ನಾಗಿರಲಿಲ್ಲ ಎಂದು ಗೊಣಗಿಕೊಂಡೇ ಊಟ ಮಾಡಿದರು.

ಇನ್ನು ಸಾವಿರಾರು ಜನರು ಊಟ ಸಿಗದೇ ಪರದಾಡಿದರು. ಎತ್ತ ನೋಡಿದರೂ ಜನವೋ ಜನ. ಸಿದ್ದರಾಮಯ್ಯರ ಜಪ. ಎಲ್ಲೆಡೆ ಬ್ಯಾನರ್, ಬಂಟ್ಸಿಂಗ್ಸ್ ಗಳ ಅಬ್ಬರ, ಸಿದ್ದು ಸಿದ್ದು ಎಂಬ ಉದ್ಘೋಷ, ಸಿದ್ದರಾಮೋತ್ಸವ ಉತ್ಸವದಂತೆ ನಡೆದರೆ, ಬೆಳಿಗ್ಗೆಯಿಂದ ವೇದಿಕೆ ಬಳಿಗೆ ಬರಲು ಜನರು ಪಟ್ಟ ಕಷ್ಟವಂತೂ ಅಷ್ಟಿಷ್ಟಲ್ಲ. ಇನ್ನು ಮಾಧ್ಯಮದವರು ವೇದಿಕೆ ಬಳಿ ಬರಲು ಹರಸಾಹಸಪಡ ಬೇಕಾಯಿತು. ಜನಸ್ತೋಮ ಹೆಚ್ಚಾದ ಕಾರಣ ಸಂಘಟಕರು ಸಹ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

Edited By :
PublicNext

PublicNext

03/08/2022 08:16 pm

Cinque Terre

28.84 K

Cinque Terre

1

ಸಂಬಂಧಿತ ಸುದ್ದಿ