ದಾವಣಗೆರೆ: 'ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪದೇ ಪದೇ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದು, ರಾಜ್ಯದ ಉದ್ದಗಲಕ್ಕೆ ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದಿದ್ದು ನಮ್ಮ ಸರ್ಕಾರ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಮಾದರಿಯಲ್ಲಿ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಸರ್ಕಾರ ಹಾಗೂ ಸಂಘಟನೆಗೆ ವರ್ಚಸ್ಸು ಉಳಿಯಲು ಸಾಧ್ಯ ಎಂದಿದ್ದಾರೆ.
ನನಗೆ ವೈಯಕ್ತಿಕವಾಗಿ ಅಧಿಕಾರಕ್ಕಿಂತ ಹಿಂದೂ ಕಾರ್ಯಕರ್ತರ ರಕ್ಷಣೆಯೇ ಮುಖ್ಯ. ಆದ್ದರಿಂದ ರಾಜ್ಯ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಾನು ನನ್ನ ಮತ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಯೋಚಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ನನಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನೂ ಸಹ ಪೊಲೀಸ್ ಇಲಾಖೆ ಇದುವರೆಗೂ ಪತ್ತೆ ಹಚ್ಚಿಲ್ಲ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಮುಜುಗರವಾಗುತ್ತದೆ. ಜನತೆಗೆ ಬೇಕಾಗಿರುವುದು ನಮ್ಮ ಪೌರುಷದ ಭಾಷಣ ಅಥವಾ ಹೇಳಿಕೆಗಳಲ್ಲ, ನಾವು ತೆಗೆದುಕೊಳ್ಳುವ ನಿರ್ದಾಕ್ಷಿಣ್ಯ ಕ್ರಮಗಳು. ಹಿಂದೂ ಸಮೂಹ ನಮ್ಮ ಮೇಲೆ ಇಟ್ಟಿರುವ ಭರವಸೆಯನ್ನ ಉಳಿಸಿಕೊಳ್ಳಲು ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಣ್ಯ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ನಾನು ಈ ಸರ್ಕಾರದಲ್ಲಿ ಮುಂದುವರೆಯುತ್ತೇನೆ, ಇಲ್ಲವಾದರೆ ರಾಜೀನಾಮೆ ನೀಡುತ್ತೇನೆ ಎನ್ನುವುದನ್ನು ಮತ್ತೊಮ್ಮೆ ಹೇಳುತ್ತೇನೆ ಎಂದು ಎಂ. ಪಿ. ರೇಣುಕಾಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
PublicNext
27/07/2022 04:15 pm