ಬೆಂಗಳೂರು: ಹೌದು ನಾವು ಗಾಂಧಿ ಕುಟುಂಬದ ಗುಲಾಮರು, ಬಿಜೆಪಿಯವರು ಹೇಳಿದ್ದು ಸತ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇ.ಡಿ. ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಮೌನ ಸತ್ಯಾಗ್ರಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶಕ್ಕೆ ಗಾಂಧಿ ಕುಟುಂಬ ಗುಲಾಮರು ಹೌದು. ಭಾರತಾಂಬೆ ಕೆಲಸ ಮಾಡಿದ ಗಾಂಧಿ ಕುಟುಂಬವಾಗಿದೆ. ಅವರು ಹೇಳ್ತಿದ್ದರಲ್ಲ ನಾವು ಗುಲಾಮರು ಅಂತ ಹೌದು, ನಾವು ಭಾರತಾಂಬೆಯ ಕೆಲಸ ಮಾಡ್ತಿದ್ದೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರೇ ನಮ್ಮ ತಾಯಿ ರಾಹುಲ್ ಗಾಂಧಿ ನಮ್ಮ ಸಹೋದರ. ಅವರ ಜೊತೆ ನಾವು ಇದ್ದೇವೆ, ಹೆದರಿಕೊಳ್ಳಬೇಡಿ. ನಿಮಗೂ ಒಳ್ಳೆಯ ಕಾಲ ಬರುತ್ತೆ. ದೇಶಕ್ಕೆ ಗಾಂಧಿ ಕುಟುಂಬ ಗುಲಾಮರೂ ಹೌದು. ಭಾರತಾಂಬೆಯ ಕೆಲಸ ಮಾಡಿದ್ದು ಗಾಂಧಿ ಕುಟುಂಬ. ಅವರು ಹೇಳ್ತಿದ್ದರಲ್ಲಾ ನಾವು ಗುಲಾಮರು ಅಂತ, ಹೌದು ನಾವು ಗುಲಾಮರೇ. ನಾವು ಭಾರತಾಂಬೆಯ ಕೆಲಸ ಮಾಡ್ತಿದ್ದೇವೆ. ಜನರ ಸೇವೆ ಮಾಡ್ತಿದ್ದೇವೆ, ಭಾರತ ತಾಯಿ ಸೇವೆ ಮಾಡ್ತಿದ್ದೇವೆ. ಭಾರತ ತಾಯಿ ಮಕ್ಕಳಾದ ನಾವು ಭಾರತದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಈಗ ಪ್ರತಿಭಟನೆ ಮಾಡ್ತಿರೋರು ಜೈಲಿಗೆ ಹೋಗಿ ಬಂದವ್ರು ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಸಿಟಿ ರವಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿಕೆಶಿ, ಅವನು ಯಾವಾನಾದ್ರೂ ಏನಾದರೂ ಮಾತಾಡಿಕೊಳ್ಳಲಿ. ಮಹಾತ್ಮಾ ಗಾಂಧೀಜಿ ಜೈಲಿಗೆ ಹೋಗವ್ರೆ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಹೋಗವ್ರೆ, ನೆಹರು ಹೋಗವ್ರೆ. ನಾವು ಏನು ಮಂಚಕ್ಕಾಗಿ ಜೈಲಿಗೆ ಹೋಗಿದ್ವಾ? ಅಥವಾ ಇನ್ನೊಂದಕ್ಕೆ ಹೋಗಿದ್ವಾ? ಎಂದು ತಿರುಗೇಟು ಕೊಟ್ಟರು.
PublicNext
26/07/2022 06:06 pm