ಕೊರಟಗೆರೆ : ತುಮಕೂರು ಜಿಲ್ಲೆ ರಾಜಕಾರಣ ಅಂದ್ರೆ ವಿಚಿತ್ರ. ಯಾರು ಯಾವ ಪಾರ್ಟಿಯಲ್ಲಿರುತ್ತಾರೋ, ಯಾರು ಯಾರನ್ನು ಓಲೈಸುತ್ತಾರೋ ಗೊತ್ತೇ ಆಗುವುದಿಲ್ಲ.
ಅಧಿಕಾರಕ್ಕಾಗಿ ಯಾರದೋ ಕೈಹಿಡಲೂ ರೆಡಿ... ಇನ್ನಾರಿಗೋ ಕೈ ಕೊಡಲೂ ರೆಡಿ.
ಇಂತಹ ಒಂದು ಪ್ರಸಂಗ ಈಚೆಗೆ ಜರುಗಿತು. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಆಡಬಾರದ ಮಾತನ್ನಾಡಿದ್ದು ಭಾರಿ ವಿವಾದಕ್ಕೆ ಕಾರಣವಾಯಿತು. ಅದಕ್ಕಾಗಿ ರಾಜ್ಯದ ಕೆಲವೆಡೆ ದೇವೇಗೌಡರ್ ಅಭಿಮಾನಿಗಳು, ಕಾರ್ಯಕರ್ತರು ಪ್ರತಿದಭಟನೆ ಮಾಡಿದರು.
ಅದೇ ರೀತಿ ತುಮಕೂರು ತಾಲೂಕಿನ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ವತಿಯಿಂದ ಮಾಜಿ ಶಾಸಕ ಪಿ.ಅರ್ ಸುಧಾಕರ್ ಲಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು,
ಆದರೆ ಸುಧಾಕರ್ ಲಾಲ್ ಮಾಡಿದ ಪ್ರತಿಭಟನೆ ಯಾವ ರೀತಿ ಇತ್ತು ಗೊತ್ತೆ?
ಒಂದರೆಡು ಕಡೆ ರಾಜಣ್ಣನವರ ಹೆಸರು ಪ್ರಸ್ತಾಪಿಸಿದ್ದು ಬಿಟ್ಟರೆ ಯಾರೊಬ್ಬರೂ ರಾಜಣ್ಣ ವಿರುದ್ದ ಯಾವುದೇ ಘೋಷಣೆಯನ್ನು ಕೂಗಲಿಲ್ಲ.. ಪ್ರತಿರೋಧ ವ್ಯಕ್ತಪಡಿಸಲಿಲ್ಲ. ಏಕೆಂದರೆ ಲಾಲ್ ಅವರಿಗೆ ರಾಜಣ್ಣ ಒಂದು ಕಾಲದಲ್ಲಿ ರಾಜಕೀಯ ಗುರು. ಹೀಗಾಗಿ ಅವರ ಬಗ್ಗೆ ಈಗಲೂ ಗುರುಭಕ್ತಿ ಇದೆ ಎಂಬುದು ಪ್ರತಿಭಟನೆಯಲ್ಲಿ ವ್ಯಕ್ತವಾಯಿತು.
ಹಾಗಾದ್ರೆ ಗುರುಭಕ್ತಿ ಇರಬೇಕಾದ್ರೆ ದೇವೇಗೌಡರನ್ನು ಬೆಂಬಲಿಸಿ ಲಾಲ್ ಪ್ರತಿಭಟನೆ ಮಾಡಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಇಲ್ಲೆ ಇರುವುದು ರಾಜಕೀಯ ತಂತ್ರ. ಮುಂಬರುವ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೇ ಕಣಕ್ಕಿಳಿಯುತ್ತಿದ್ದಾರೆ. ಇಷ್ಟು ಮಾತ್ರವಲ್ಲ ಸುಧಾಕರ್ ಲಾಲ್ ಅವರೆ ಕೊರಟಗೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ದೇವೇಗೌಡರು ಘೋಷಿಸಿದ್ದಾರೆ. ಹೀಗಾಗಿ ಗೌಡರನ್ನು ಮೆಚ್ಚಿಸಲು ನಾಮಕಾವಾಸ್ತೆ ರಾಜಣ್ಣ ವಿರುದ್ಧ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿತ್ತು ಎಂದು ಹೇಳಬಹುದು.
ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸುಧಾಕರ್ ಲಾಲ್ ರಾಜಣ್ಣ ಗರಡಿಯಲ್ಲಿ ಬೆಳೆದವರು. ಹೀಗಾಗಿ ತಮ್ಮ ರಾಜಕೀಯ ಗುರುವಿನ ವಿರುದ್ಧ ಹೇಗೆ ಪ್ರತಿಭಟನೆ ಮಾಡಲು ಸಾಧ್ಯ? ಹೀಗಾಗಿ ನೆಪಮಾತ್ರಕ್ಕೆ ಪ್ರತಿಭಟನೆ ಮಾಡಿ, ಜೆಡಿಎಸ್ ವರಿಷ್ಠರಿಗೆ ಪ್ರತಿಭಟನೆ ಮಾಡಿದ್ದೇವೆ ಎನ್ನುವ ಸಂದೇಶ ರವಾನಿಸುವುದಷ್ಟೇ ಆಗಿತ್ತು. ಅದರಲ್ಲಿ ಲಾಲ್ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕ್ಷೇತ್ರದ ಜೆಡಿಎಸ್ ವಲಯದಿಂದಲೇ ಕೇಳಿಬರುತ್ತಿದೆ.
ವರದಿ : ರಾಘವೇಂದ್ರ ಡಿ.ಎಂ, ಕೊರಟಗೆರೆ
PublicNext
08/07/2022 01:48 pm