ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನಲ್ಲಿಯೇ ಅಡ್ಡಗಾಲು ಹಾಕಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರೇ ನಿಮ್ಮ ವಿರುದ್ಧ ಇದ್ದಾರೆ. ಯಾಕೆ ಡಿಫೆಂಡ್ ಮಾಡಿಕೊಳ್ಳುತ್ತೀರಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯರೇ ಅನೇಕ ಬಾರಿ ವೇದಿಕೆಯಲ್ಲಿ ಕಾಂಗ್ರೆಸ್ ಕಿತ್ತೊಗೆಯಿರಿ ಎಂದಿದ್ದಾರೆ. ಸಿದ್ದರಾಮಯ್ಯರ ಮನಸ್ಸಿನಲ್ಲಿ ಕಾಂಗ್ರೆಸ್ ಇಲ್ಲ. ದೇಹ ಮಾತ್ರ ಇದೆ. ಕಾಂಗ್ರೆಸ್ ನಲ್ಲಿ ನಿಮ್ಮ ನಾಯಕತ್ವ ಒಪ್ಪಲ್ಲ. ಹೊರಗೆ ಬಂದು ನಿಮ್ಮ ಮುಂದಿನ ದಾರಿ ನೋಡಿಕೊಳ್ಳಿ ಎಂದರು.
ಬಿಜೆಪಿಯ ಒಬ್ಬೊಬ್ಬ ಕಾರ್ಯಕರ್ತ ಸಿಂಹದ ಮರಿ. ಹಿಂದುತ್ವ, ಅಭಿವೃದ್ಧಿ, ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಒಬ್ಬ ಕಾರ್ಯಕರ್ತನೂ ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್, ಜೆಡಿಎಸ್ ನ ಶಾಸಕರು ಬಿಜೆಪಿಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಿದ್ದರಾಮಯ್ಯರನ್ನು ಸೆಳೆಯುವ ಪ್ರಯತ್ನ ಮಾಡಲ್ಲ. ಕೇಂದ್ರದ ವರಿಷ್ಠರ ನಿರ್ಧಾರಕ್ಕೆ ಬದ್ಧ. ಅವರು ಬಂದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಲ್ಲಿ ತಾನು ಮುಂಚೂಣಿಯಲ್ಲಿರಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ನಡುವೆ ಸ್ಪರ್ಧೆ ಇದೆ. ರಾಜ್ಯಸಭೆ ಚುನಾವಣೆ ಸಂದರ್ಭ ಹೆಚ್. ಡಿ. ದೇವೇಗೌಡರ ಪರವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಮತ ಹಾಕುವಂತೆ ಮಲ್ಲಿಕಾರ್ಜುನ್ ಖರ್ಗೆ ಮನವಿ ಮಾಡಿದ್ದರು. ಆದ್ರೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಒಂದಾಗಿ ಅಲ್ಪಸಂಖ್ಯಾತ ಮುಖಂಡನನ್ನು ಸೋಲಿಸಿದರು ಎಂದರು.
PublicNext
04/07/2022 08:54 pm