ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನ ಪರಿಷತ್ ಚುನಾವಣೆಯ ಬೆನ್ನಲ್ಲೇ ಬಿಕ್ಕಟ್ಟು ಉದ್ಭವಿಸಿದೆ. ಶಿವಸೇನಾ ನಾಯಕ ಮತ್ತು ಸಚಿವ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ 21 ಶಾಸಕರು, ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿ ಮೆರಿಡಿಯನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಪತನದ ಭೀತಿ ಶುರುವಾಗಿದೆ.
ನಿನ್ನೆ ರಾತ್ರಿ ಎಲ್ಲಾ ಶಾಸಕರು ಖಾಸಗಿ ವಿಮಾನದಲ್ಲಿ ಸೂರತ್ಗೆ ತೆರಳಿದ್ದರಂತೆ. ಇಂದು ಸಂಜೆ ವೇಳೆ ಏಕ್ನಾಥ್ ಶಿಂಧೆ ಸುದ್ದಿಗೋಷ್ಠಿ ನಡೆಸಿ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಶಿಂಧೆ, ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದ್ದು, ಸಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ.
ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ 10 ಎಂಎಲ್ಸಿ ಚುನಾವಣೆಯಲ್ಲಿ ಶಿವಸೇನೆ 2, ಎನ್ಸಿಪಿ 2, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜಯಗಳಿಸಿತ್ತು. ಆದರೆ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಬರೋಬ್ಬರಿ 5 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿ ಬಳಿ ನಾಲ್ವರು ಅಭ್ಯರ್ಥಿಗಳನ್ನು ಮಾತ್ರ ಗೆಲ್ಲಿಸಿಕೊಳ್ಳಲು ಸದಸ್ಯರ ಸಂಖ್ಯಾಬಲವಿತ್ತು. ಆದರೆ ಐದನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ ಬಿಜೆಪಿ ಐವರನ್ನು ಗೆಲ್ಲಿಸಿಕೊಂಡಿತ್ತು. ಈ ವೇಳೆ ಕನಿಷ್ಠ 20 ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದರು ಎನ್ನಲಾಗಿತ್ತು.
PublicNext
21/06/2022 03:06 pm