ಮುಂಬೈ : ಅವಿರೋಧ ಆಯ್ಕೆಗೆ ಅವಕಾಶವಿದ್ದರೂ, ಸಂಖ್ಯಾ ಬಲ ತನ್ನ ಪರ ಇಲ್ಲದಿದ್ದರೂ ಹಟ ಹಿಡಿದು ಆರನೇ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಚುನಾವಣೆ ನಡೆಯುವಂತೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪಕ್ಷದ ಆರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಹೌದು ಮಹಾರಾಷ್ಟ್ರ ವಿಧಾನಸಭೆಯಿಂದ ರಾಜ್ಯಸಭೆಯ 6 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ಈ ಮೂಲಕ ಮಹಾರಾಷ್ಟ್ರದ ಆಡಳಿತಾರೂಢ ಅಘಾಡಿ ಸರ್ಕಾರದ ಅಭ್ಯರ್ಥಿಗೆ ಸೋಲಾಗಿದ್ದು, ಆಡಳಿತ ಕೂಟಕ್ಕೆ ತೀವ್ರ ಮುಖಭಂಗವಾಗಿದೆ.
ಬಿಜೆಪಿಯಿಂದ ಕೇಂದ್ರ ಸಚಿವ ಪೀಯೂಷ್ ಗೋಯಲ್, ಮಾಜಿ ಸಚಿವ ಅನಿಲ್ ಬೊಂಡೆ, ಧನಂಜಯ ಮಹದಿಕ್ ಚುನಾಯಿತರಾಗಿದ್ದರೆ, ಅಘಾಡಿ ಕೂಟದಿಂದ ಶಿವಸೇನೆಯ ಸಂಜಯ ರಾವುತ್, ಎನ್ ಸಿಪಿಯ ಪ್ರಫುಲ್ ಪಟೇಲ್, ಕಾಂಗ್ರೆಸ್ಸಿನ ಇಮ್ರಾನ್ ಪ್ರತಾಪ್ ಗಢಿ ಅವರು ಆಯ್ಕೆಯಾಗಿದ್ದಾರೆ.
ಆರನೇ ಸ್ಥಾನಕ್ಕೆ ಎನ್ ಸಿಪಿಯಿಂದ ಸಂಜಯ್ ಪವಾರ್ ಹಾಗೂ ಬಿಜೆಪಿಯಿಂದ ಮಹದಿಕ್ ಅವರು ಸ್ಪರ್ಧಿಸಿದ್ದರು. ಪಕ್ಷೇತರರ ಬೆಂಬಲವನ್ನು ಅನಿರೀಕ್ಷಿತವಾಗಿ ಪಡೆಯುವಲ್ಲಿ ಫಡ್ನವೀಸ್ ಯಶಸ್ವಿಯಾಗಿದ್ದರಿಂದ ಮಹದಿಕ್ (41.56) ಅವರು ಶಿವಸೇನೆಯ ಅಭ್ಯರ್ಥಿ ಪವಾರ್ಗಿಂತ (41) ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದಾರೆ.
PublicNext
12/06/2022 07:55 am